ಶ್ವಾನದ ಮಾಲೀಕರಾದ ರಾಘವೇಂದ್ರ ಭಟ್ ಹಾಗೂ ರಾಜೇಶ್ವರಿ ಭಟ್ ಮಾತನಾಡಿದರು.
ಕಾರವಾರ: ನಿಯತ್ತಿಗೆ ಮತ್ತೊಂದು ಹೆಸರೇ ಶ್ವಾನ.ಅಂಕೋಲಾದಿಂದ ಇಂಡಿಯನ್ ಆರ್ಮಿ ಸೇವೆಗೆ ಬೆಲ್ಜಿಯಂ ಮೆಲಿನೋಯ್ಸ್ ತಳಿಯ 17 ಶ್ವಾನಗಳು ತೆರಳಿದವು. ಶ್ವಾನಗಳ ಮಾಲೀಕರ ಕುಟುಂಬಸ್ಥರಲ್ಲಿ ಸಂತಸದ ವಾತಾವರಣಕ್ಕೆ ಕಾರಣವಾಯಿತು.
ಇಂತಹ ನಿಯತ್ತಿನ ಕಾರಣಕ್ಕೆ ಇದೀಗ ಅಂಕೋಲಾದಿಂದ 17 ಶ್ವಾನಗಳು ಅಸ್ಸೋಂ ಇಂಡಿಯನ್ ಆರ್ಮಿಗೆ ಸೇರ್ಪಡೆಯಾಗಿದ್ದು, ಮನುಷ್ಯರಂತೆ ಪ್ರಾಣಿಗಳಿಗೂ ದೇಶ ಭಕ್ತಿ ಇದೆ ಎಂಬುದನ್ನು ತೋರಿಸಲು ಮುಂದಾಗಿವೆ. ಹೌದು, ಅಂಕೋಲಾ ಬಾವಿಕೇರಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉದ್ಯೋಗಿ ರಾಘವೇಂದ್ರ ಭಟ್ ಎಂಬುವವರು ಇದೀಗ ತಮ್ಮ ಬೆಲ್ಜಿಯಂ ಮೆಲಿನೋಯ್ಸ್ ತಳಿಯ ನಾಯಿ ಮರಿಗಳನ್ನು ಇದೀಗ ದೇಶ ಸೇವೆಗೆ ಕಳುಹಿಸಿಕೊಟ್ಟಿದ್ದಾರೆ.
ಕಳೆದ 25 ವರ್ಷಗಳಿಂದ ರಾಘವೇಂದ್ರ ಭಟ್ ಅವರು ಬೆಲೆ ಬಾಳುವ ತಳಿಗಳಾದ ಡಾಬರ್ಮನ್, ಜರ್ಮನ್ ಶೆಫರ್ಡ್, ಪಿಟ್ಬುಲ್, ಅಮೆರಿಕನ್ ಬುಲ್ಲಿ, ಮುಧೋಳ್, ಪಾಕಿಸ್ತಾನ ಬುಲ್ಲಿ, ಬಾಕ್ಸರ್, ಪಗ್, ಗ್ರೇಟ್ ಡೇನ್, ಲ್ರಾಬ್ರಡಾರ್ ಹಾಗೂ ಬೆಲ್ಝಿಯಂ ಮೆಲಿನೋಯ್ಸ್ ಮುಂತಾದ ನಾಯಿಗಳನ್ನು ಸಾಕಿದ್ದಾರೆ. ಇದೀಗ ಅವರು ಸಾಕಿದ್ದ ಬೆಲ್ಜಿಯಂ ಮೆಲಿನೋಯ್ಸ್ ತಳಿಯ 17 ನಾಯಿ ಮರಿಗಳನ್ನು ಇದೀಗ ಇಂಡಿಯನ್ ಆರ್ಮಿಯ ಅಸ್ಸಾಂಗೆ ದೇಶ ಸೇವೆಗೆ ನೀಡಲಾಗಿದೆ.
ನಾಯಿ ಮರಿಗಳು ದೇಶ ಸೇವೆಗೆ ತೆರಳಿರುವುದು ಖುಷಿ- ರಾಘವೇಂದ್ರ ಭಟ್: ಇನ್ನು ಈ ಹಿಂದೆ ಸಾಕಿದ್ದ ಬೆಲ್ಜಿಯಂ ಮೆಲಿನೋಯ್ಸ್ ಜಾತಿಯ ನಾಯಿಗಳು ಬೆಂಗಳೂರಿನ ಪೊಲೀಸ್ ಇಲಾಖೆ, ಕಾರ್ಕಳ ಎಎನ್ಎಫ್, ಬೆಳಗಾಂ ಮತ್ತು ಹುಬ್ಬಳ್ಳಿ ಏರ್ಪೋರ್ಟ್ನಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ಇದೀಗ ಇಂಡಿಯನ್ ಆರ್ಮಿಯ ತಂಡವೇ ಬಂದು ಬೆಲ್ಜಿಯಂ ಮೆಲಿನೋಯ್ಸ್ ತಳಿಯ 17 ನಾಯಿ ಮರಿಗಳನ್ನು ಖಾಸಗಿ ಎಸಿ ಬಸ್ನಲ್ಲಿ ಮೂಲಕ ಅಸ್ಸೋಂನತ್ತ ತೆಗೆದುಕೊಂದು ಹೋಗಲಾಯಿತು. ನಾವು ಸಾಕಿರುವ ನಾಯಿಮರಿಗಳು ಪ್ರಸ್ತುತ ದೇಶ ಸೇವೆಗೆ ತೆರಳಿರುವುದು ಸಾಕಷ್ಟು ಖುಷಿ ತಂದುಕೊಟ್ಟಿದೆ ಎನ್ನುತ್ತಾರೆ ಶ್ವಾನದ ಮಾಲೀಕರಾದ ರಾಘವೇಂದ್ರ ಭಟ್.
ದೇಶ ಸೇವೆ ಮಾಡಲು ಮನುಷ್ಯನಿಗೆ ಮಾತ್ರವಲ್ಲ. ಪ್ರಾಣಿಗಳಿಗೂ ಅವಕಾಶವಿದೆ ಎಂಬುದನ್ನ ಈ ನಾಯಿಮರಿಗಳು ಸಾಬೀತು ಮಾಡಿವೆ. ತಮ್ಮೂರಿನ ನಾಯಿ ಮರಿಗಳು ಇಂಡಿಯನ್ ಆರ್ಮಿಯಲ್ಲಿ ಸೇವೆಗೆ ತೆರಳಿರುವುದು ನೋಡಿ ಊರಿನ ಜನರು ಕೂಡ ತುಂಬಾ ಹರ್ಷ ವ್ಯಕ್ತಪಡಿಸಿದ್ದಾರೆ.
ಶ್ವಾನದ ಮಾಲೀಕರ ಕುಟುಂಬಸ್ಥರಲ್ಲಿ ಸಂತಸ: ಇನ್ನು ಅಂಕೋಲಾದಿಂದ ಇದೇ ಮೊದಲ ಬಾರಿಗೆ ಸಾಕಿದ ನಾಯಿ ಮರಿಗಳನ್ನು ಆರ್ಮಿಗೆ ಕಳುಹಿಸಲಾಗುತ್ತಿದೆ. ಇದರಿಂದ ಎಲ್ಲರಿಗೂ ಸಹ ಹೆಮ್ಮೆಯನ್ನುಂಟು ಮಾಡಿದೆ. ರಾಘವೇಂದ್ರ ಭಟ್ ಅವರ ಕುಟುಂಬಸ್ಥರ ಸಂತಸಕ್ಕಂತೂ ಪಾರವೇ ಇಲ್ಲದಾಗಿದೆ. ತಾವು ಸಾಕಿದ ನಾಯಿಮರಿಗಳು ತಮ್ಮನ್ನ ಬಿಟ್ಟು ಹೋಗುತ್ತಿರುವ ಬೇಸರ ಇದ್ದರೂ ಕೂಡ ಅದಕ್ಕಿಂತ ಹೆಚ್ಚು ಅವು ಹೋಗುತ್ತಿರುವುದು ದೇಶ ಸೇವೆಗೆ ಎಂಬ ಸಂತಸ ನಮ್ಮಲ್ಲಿದೆ ಎನ್ನುತ್ತಾರೆ ಶ್ವಾನದ ಮಾಲೀಕರಾದ ರಾಜೇಶ್ವರಿ ಭಟ್.