ಉಡುಪಿ: ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ತಿಂಗಳೊಳಗೆ ಕಾಂಗ್ರೆಸ್ ನೇತೃತ್ವದ ರಿವರ್ಸ್ ಗೇರ್ ಸರಕಾರ ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿಯನ್ನು ವಾಪಸ್ ಪಡೆಯಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡಿರುವುದು ಒಂದೆರಡು ವರ್ಗಗಳ ಓಲೈಕೆಯ ಸಹಿತ ಮತ ಬ್ಯಾಂಕ್ ಭದ್ರಪಡಿಸುವ ಹುನ್ನಾರ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಬಲವಂತದ ಮತಾಂತರ, ಆಮಿಷದ ಮತಾಂತರ ಇತ್ಯಾದಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಕಳೆದ ಅವಧಿಯಲ್ಲಿ ಮತಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ತಂದಿದ್ದು ಇದರನ್ವಯ ಬಲವಂತದ ಮತಾಂತರವನ್ನು ಅಪರಾಧವೆಂದು ಪರಿಗಣಿಸುವ ಜೊತೆಗೆ 3 ರಿಂದ 10 ವರ್ಷಗಳ ಶಿಕ್ಷೆಗೆ ಅವಕಾಶ ಹಾಗೂ ಇನ್ನಿತರ ಹಲವಾರು ಪೂರಕ ನಿಯಮಗಳನ್ನು ರೂಪಿಸಿದೆ.
ಕಾಂಗ್ರೆಸ್ ಸರಕಾರ ಈ ಜನ ವಿರೋಧಿ ನಿರ್ಣಯದ ಮೂಲಕ ಲವ್ ಜಿಹಾದ್ ಪಿಡುಗು ಹಾಗೂ ಇತರ ಮಾರ್ಗಗಳ ಮೂಲಕ ನಡೆಯುತ್ತಿರುವ ಮೋಸದ ಮತಾಂತರಕ್ಕೆ ಪ್ರೋತ್ಸಾಹ ನೀಡಿದಂತಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆಯಬಹುದಾದ ಬಲವಂತದ ಮತಾಂತರ ಪ್ರಕರಣಗಳಿಗೆ ಕಾಂಗ್ರೆಸ್ ಸರಕಾರವೇ ನೇರ ಹೊಣೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರಕಾರ ಪಠ್ಯ ಪುಸ್ತಕ ಪರಿಷ್ಕರಣೆ ನಿರ್ಣಯದ ಮೂಲಕ ವಿದ್ಯಾರ್ಥಿಗಳು ವೀರ ಸಾವರ್ಕರ್, ಹೆಡಗೇವಾರ್ ಅವರಂತಹ ಮಹಾನ್ ಪುರುಷರ ಜೀವನ ಮೌಲ್ಯಗಳನ್ನು ಅರಿಯುವ ನಿಟ್ಟಿನಲ್ಲಿ ಅವಕಾಶ ವಂಚಿತರನ್ನಾಗಿಸಿದೆ. ಸರಕಾರದ ಈ ನಡೆ ಮತಾಂಧ ಶಕ್ತಿಗಳ ಅಜೆಂಡಾವನ್ನು ಜಾರಿಗೆ ತರುವ ಸೇಡಿನ ರಾಜಕಾರಣವಾಗಿದೆ.
ನಕಲಿ ಗ್ಯಾರಂಟಿಗಳ ಮೂಲಕ ಮೋಸದಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಕೊಟ್ಟ ಮಾತನ್ನು ನೆರವೇರಿಸಲಾಗದೆ ಮುಖಭಂಗ ಎದುರಿಸುತ್ತಿದ್ದು, ಜನತೆಯ ಗಮನವನ್ನು ಬೇರೆಡೆಗೊಯ್ಯಲು ಜನ ವಿರೋಧಿ ನಿರ್ಣಯಗಳನ್ನು ಕೈಗೊಳ್ಳುತ್ತಿದೆ. ಸರಕಾರದ ಮೋಸದ ತಂತ್ರವನ್ನರಿತು ಅಲ್ಲಲ್ಲಿ ಬೀದಿಗಿಳಿದು ರಾಜ್ಯ ಸರಕಾರದ ವಿರುದ್ಧ ಪ್ರತಿಭಟಿಸುತ್ತಿರುವ ಜನತೆ ವಚನಭ್ರಷ್ಟ ಕಾಂಗ್ರೆಸ್ಸಿನ ಜನ ವಿರೋಧಿ ನಡೆಗೆ ಸೂಕ್ತ ಸಮಯದಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.