ಒಂದು ದಶಕದ ಹಿಂದೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ತಮ್ಮ ಅಸ್ತಿತ್ವದ ಹುಡುಕಾಟದಲ್ಲಿದ್ದರು. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ರಕ್ಷಿತ್ ಶೆಟ್ಟಿ, ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 40ನೇ ವಸಂತಕ್ಕೆ ಕಾಲಿಟ್ಟಿರೋ ಶೆಟ್ರ ಸಿನಿ ಸಾಧನೆ ಹೀಗಿದೆ..
ಆದರೆ, ಎರಡು ಸಿನಿಮಾವೂ ಕಮರ್ಷಿಯಲ್ ಚೌಕಟ್ಟಿನಲ್ಲಿ ಗೆಲ್ಲಲಿಲ್ಲ. ಆ ಕಾಲಕ್ಕೆ ಗಾಂಧಿನಗರದ ಪಡಸಾಲೆಯಲ್ಲಿ ಇದ್ದ ತ್ರಿಭುವನ್ ಚಿತ್ರಮಂದಿರದ ಮುಂದೆ ಇದೇ ರಕ್ಷಿತ್ ಶೆಟ್ಟಿ ಸೋಲಿಂದ ಕಣ್ಣೀರಿಟ್ಟಿದ್ದರು. ಆದರೆ ಕಣ್ಣೀರಿಟ್ಟಿದ್ದ ಅದೇ ಜಾಗದಲ್ಲಿ ಮುಂದೊಂದು ದಿನ ರಕ್ಷಿತ್ ಶೆಟ್ಟಿ ಗೆಲುವಿನ ಮೆರವಣಿಗೆ ನಡೆಯಿತು. ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಅವರ ಸ್ಥಾನಮಾನವನ್ನೇ ಬದಲಾಯಿಸಿಬಿಟ್ಟಿತು.
ಕನ್ನಡ ಚಿತ್ರರಂಗದಲ್ಲಿ ಮಿಂಚಬೇಕೆಂಬ ಪಣ ತೊಟ್ಟಿದ್ದರು. ಆದರೆ, ಇದು ಬಣ್ಣದ ಲೋಕ. ಅವಕಾಶ ಗಿಟ್ಟಿಸಿಕೊಳ್ಳುವುದು ಅಷ್ಟೊಂದು ಸುಲಭವಲ್ಲ. ಹೀಗಿರುವಾಗ್ಲೇ ಅದೊಂದು ದಿನ ಅರವಿಂದ್ ಕೌಶಿಕ್ ‘ನಮ್ ಏರಿಯಾಲ್ ಒಂದು ದಿನ’ ಹಾಗೂ ‘ತುಘ್ಲಕ್’ ಸಿನಿಮಾಗಳಲ್ಲಿ ರಕ್ಷಿತ್ ಶೆಟ್ಟಿಗೆ ಅವಕಾಶವನ್ನು ಕೊಟ್ಟರು. ಉತ್ತಮ ನಾಯಕನನ್ನು ಕನ್ನಡ ಇಂಡಸ್ಟ್ರಿಗೆ ಪರಿಚಯಿಸಿದರು.
ಅಲ್ಲಿಯವರೆಗೆ ಅವರಿಗಿದ್ದ ಹತಾಶೆ, ನೋವು ಎಲ್ಲವೂ ರಾತ್ರಿ ಕಳೆದು ಹಗಲು ಆಗುವಷ್ಟರಲ್ಲಿ ಮರೆಯಾಗಿತ್ತು. ಕರುನಾಡಿನಲ್ಲಿ ಹೊಸ ನಾಯಕನ ಜನನವಾಗಿತ್ತು. ಅಭಿಮಾನಿ ಸಂಘಗಳೆಲ್ಲ ಹುಟ್ಟಿಕೊಂಡು ರಕ್ಷಿತ್ ಶೆಟ್ಟಿಗೆ ‘ಸಿಂಪಲ್ ಸ್ಟಾರ್’ ಎಂಬ ಪಟ್ಟಾಭಿಷೇಕವನ್ನು ಮಾಡಿದರು. ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ರಕ್ಷಿತ್ ಶೆಟ್ಟಿ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 40ನೇ ವಸಂತಕ್ಕೆ ಕಾಲಿಟ್ಟಿರೋ ಶೆಟ್ರ ಸಿನಿ ಸಾಧನೆ ಹಲವರಿಗೆ ಆದರ್ಶ.
ಶೆಟ್ರ ಸಿನಿ ಜರ್ನಿ: ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ಯ ಅಭೂತಪೂರ್ವ ಗೆಲುವಿನ ನಂತರ ರಕ್ಷಿತ್ ಶೆಟ್ಟಿಗೆ ಅನೇಕ ಅವಕಾಶ ಒದಗಿ ಬಂದಿದ್ದವು. ಅವರು ಮನಸು ಮಾಡಿದ್ದರೆ, ದುಡ್ಡು ಪಡೆದು ಚಿತ್ರಗಳಿಗೆ ಬಣ್ಣ ಹಚ್ಚಿ ಬರಬಹುದಿತ್ತು. ಸಂಭಾವನೆ ಏರಿಸಿಕೊಂಡು ಮೆರೆಯಬಹುದಿತ್ತು. ಆದರೆ ಹೊಳೆಗೆ ಸುರಿದರೂ ಅಳೆದು ಸುರಿಯಬೇಕು ಅನ್ನುವುದು ರಕ್ಷಿತ್ ಶೆಟ್ಟಿಯ ಆಲೋಚನೆ. ಹೀಗಾಗಿಯೇ ನಿರ್ದೇಶಕನಾದ ರಕ್ಷಿತ್ ಶೆಟ್ಟಿ ‘ಉಳಿದವರು ಕಂಡಂತೆ’ ಸಿನಿಮಾವನ್ನು ನಿರ್ದೇಶಿಸಿದರು.
ವಿಪರ್ಯಾಸವೆಂದರೆ ಶೆಟ್ರ ಮೊದಲ ನಿರ್ದೇಶನದ ಸಿನಿಮಾ ಅವರ ಕೈ ಹಿಡಿಯಲಿಲ್ಲ. ಉತ್ತಮ ಪ್ರಯೋಗವೆನಿಸಿಕೊಂಡರು ಉಳಿದವರು ಕಂಡಂತೆ ಗೆಲ್ಲಲಿಲ್ಲ. ಅದರ ನಂತರ ಬಂದ ‘ವಾಸ್ತು ಪ್ರಕಾರ’ ಸಿನಿಮಾವು ಶೆಟ್ರಗೆ ಸರಿಹೋಗಲಿಲ್ಲ. ಉತ್ತಮ ವಿಮರ್ಶೆ ಪಡೆದ ‘ರಿಕ್ಕಿ’ ಕೂಡ ಹಣ ಮಾಡಲಿಲ್ಲ. ಆದರೆ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಒಂದು ಹಂತಕ್ಕೆ ರಕ್ಷಿತ್ ಶೆಟ್ಟಿಯವರ ಕೈಯನ್ನು ಹಿಡಿದು ಮತ್ತೆ ಎಬ್ಬಿಸಿದ್ದಂತು ನಿಜ.
ಅದಾಗಿ ಬಂದ ಕಿರಿಕ್ ಪಾರ್ಟಿ ಶೆಟ್ರನ್ನ ಸ್ಟಾರ್ ಆಗಿ ಮಾಡಿತು. ಕಾಲೇಜು ಹುಡುಗ್ರು ಈ ಸಿನಿಮಾವನ್ನು ಹುಚ್ಚೆದ್ದು ನೋಡಿದ್ರು. ಹಾಡಿನ ಸಮೇತ ಚಿತ್ರ ಸೂಪರ್ ಹಿಟ್ ಕೂಡ ಆಗಿ ಹೊರ ಹೊಮ್ಮಿತು. ಕಿರಿಕ್ ಪಾರ್ಟಿಯ ಅದ್ವಿತೀಯ ಯಶಸ್ಸಿನಿಂದ ರಕ್ಷಿತ್ ಶೆಟ್ಟಿ ಬದಲಾಗ್ತಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಬೇರೆ ನಿರ್ಮಾಣ ಸಂಸ್ಥೆಯ ಚಿತ್ರಗಳಿಗೆ ನಾಯಕನಾಗ್ತಾರೆ ಎಂದೇ ಬಹುತೇಕರು ಭವಿಷ್ಯವನ್ನು ನುಡಿದಿದ್ದರು.
ಆದರೆ ಆ ಭವಿಷ್ಯವನ್ನೇ ಸುಳ್ಳಾಗಿಸಿದ ರಕ್ಷಿತ್ ‘ಶ್ರೀಮನ್ನಾರಾಯಣ’ನ ಸಹವಾಸ ಮಾಡಿದರು. ಪ್ಯಾನ್ ಇಂಡಿಯಾ ನನ್ನದು ಒಂದು ಗೆಲುವಿನ ಬಾವುಟ ಇರಲಿ ಎಂದು ಕಾಲಿಗೆ ಚಕ್ರ ಕಟ್ಟಿಕೊಂಡು ಊರೆಲ್ಲ ಓಡಾಡಿದರು. ಆದರೆ ‘ಅವನೇ ಶ್ರೀಮನ್ನಾರಾಯಣ’ ಪ್ಯಾನ್ ಇಂಡಿಯಾ ಲೆವಲ್ನಲ್ಲಿ ಸದ್ದು ಮಾಡಿತಾದರೂ ಅಂದುಕೊಂಡ ಮಟ್ಟಿನಲ್ಲಿ ಸಕ್ಸಸ್ ಕಾಣಲಿಲ್ಲ.
ಈ ನಡುವೆ ರಶ್ಮಿಕಾ ಮಂದಣ್ಣ ಜೊತೆ ಪ್ರೇಮದ ಅಮಲೇರಿಸಿಕೊಂಡಿದ್ದ ರಕ್ಷಿತ್ ಶೆಟ್ಟಿಗೆ ದಿವ್ಯ ಜ್ಞಾನೋದಯವಾಯ್ತು. ಅವರಿಬ್ಬರ ಸಂಬಂಧ ನಿಶ್ಚಿತಾರ್ಥದ ಬಳಿಕ ಕೊನೆಗೊಂಡಿತ್ತು. ಮತ್ತೊಂದೆಡೆ ಸಿನಿಮಾ ಹಾಡಿನ ವಿಚಾರಕ್ಕೆ ಲಹರಿ ವೇಲು ರಕ್ಷಿತ್ ಶೆಟ್ಟಿಯ ಮೇಲೆ ಕೇಸು ಜಡಿದರು. ಅವನೇ ಶ್ರೀಮನ್ನಾರಾಯಣದ ನಂತರ ರಕ್ಷಿತ್ ಶೆಟ್ಟಿ ಹಾಗೂ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ನಡುವಿನ ಸಂಬಂಧ ಕೂಡ ಹಳಸಿ ಹೋಯಿತು. ಇಷ್ಟಾದರೂ ರಕ್ಷಿತ್ ಶೆಟ್ಟಿ ಕುಗ್ಗಲಿಲ್ಲ, ಬಗ್ಗಲಿಲ್ಲ. ಬದಲಾಗಿ ಮರಳಿ ಪ್ರಯತ್ನ ಮಾಡಿದರು.
ಒಟ್ಟಿನಲ್ಲಿ ಕರಾವಳಿ ಸೊಗಡಿನ ಕನ್ನಡ ಮಾತನಾಡುವ ನಾಯಕರನ್ನು ಎಲ್ಲ ಪ್ರಾಂತ್ಯದ ಜನ ಒಪ್ಪೋದು ಕಷ್ಟವೆನ್ನುವ ಮಾತನ್ನು ಸುಳ್ಳಾಗಿಸಿದವರು ರಕ್ಷಿತ್ ಶೆಟ್ಟಿ. ಕೇವಲ ಒಂದೇ ಒಂದು ದಶಕದಲ್ಲಿ ಅಂದುಕೊಂಡಿದ್ದನ್ನು ಸಾಧಿಸಿದ ಸಿಂಪಲ್ ಸ್ಟಾರ್ ಇಂದು ಅನೇಕರ ಅಚ್ಚು ಮೆಚ್ಚಿನ ನಟ ಹಾಗೂ ನಿರ್ದೇಶಕ ಕೂಡ ಹೌದು. ರಕ್ಷಿತ್ ಸಿನಿಮಾಗಾಗಿ ಕೇವಲ ಕನ್ನಡಿಗರಷ್ಟೇ ಅಲ್ಲ, ಬೇರೆ ಭಾಷೆಯವರು ಕಾದು ಕುಳಿತಿರುವುದು ಅವರ ಜನಪ್ರಿಯತೆಗೆ ಹಿಡಿದ ಕೈಗನ್ನಡಿ.
777 ಚಾರ್ಲಿ ಮೂಲಕ ಅಂದುಕೊಂಡಿದ್ದನ್ನು ಸಾಧಿಸಿದರು. ಕೇವಲ ಕನ್ನಡಿಗರ ಹೃದಯವನ್ನಷ್ಟೇ ಅಲ್ಲ ಭಾರತೀಯ ಸಿನಿಮಾ ಪ್ರೇಮಿಗಳ ಹೃದಯವನ್ನೇ ಕದ್ದುಬಿಟ್ಟರು. ಇಂತಹ ರಕ್ಷಿತ್ ಶೆಟ್ಟಿ ಸದ್ಯಕ್ಕೆ ಸಪ್ತಸಾಗರದಾಚೆ ಎಲ್ಲೋ ಚಿತ್ರದ ಗುಂಗಿನಲ್ಲಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಚಿತ್ರ ಕೇವಲ ಒಂದು ಭಾಗದಲ್ಲಿ ಅಷ್ಟೇ ಅಲ್ಲ, ಎರಡು ಭಾಗದಲ್ಲಿ ಬಿಡುಗಡೆಯಾಗಲಿದೆ ಎಂಬ ಶುಭ ಸಮಾಚಾರವನ್ನೂ ತಮ್ಮ ಅಭಿಮಾನಿಗಳಿಗೆ ನೀಡಿದ್ದಾರೆ.