ಪುತ್ತೂರು: ಅವಿಭಜಿತ ಪುತ್ತೂರು ತಾಲೂಕಿನಲ್ಲಿ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರ ಕೊರತೆಯಾಗಲಾರದು. ಈಗಾಗಲೇ ನೇರನೇಮಕಾತಿ ಮೂಲಕ ೧೩೦ ಶಿಕ್ಷಕರು ಹಾಗೂ ೧೮೦ ಅತಿಥಿ ಶಿಕ್ಷಕರು ನೇಮಕಗೊಳ್ಳಲಿದ್ದಾರೆ ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಬುಧವಾರ ಹಾರಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ತಾಲೂಕುಮಟ್ಟದ ಶಾಲಾ ಪ್ರಾರಂಬೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಶಿಕ್ಷಣದ ಬೆಳವಣಿಗೆಗೆ ಶೇ.೬೦ ರಷ್ಟು ಶಿಕ್ಷಕರ ಸಹಾಯಬೇಕು. ಉಳಿದ ಶೇ.೪೦ ಮಕ್ಕಳ ತಂದೆತಾಯಿಯ ಜವಾಬ್ದಾರಿಯಾಗಿದೆ. ಈ ಎರಡೂ ವಿಚಾರಗಳು ಸಾಧ್ಯವಾದರೆ ಶಿಕ್ಷಣದಲ್ಲಿ ಪ್ರಗತಿ ಸಾಧ್ಯವಾಗುತ್ತದೆ. ಶಿಕ್ಷಣದಲ್ಲಿ ಬದಲಾವಣೆ ಆದರೆ ಸಮಾಜದ ಸುಧಾರಣೆ ಖಂಡಿತ ಎಂದು ಅವರು ಹೇಳಿದರು.
ಶಾಲೆಗಳಲ್ಲಿ ಕಟ್ಟಡ ಕೊರತೆ, ಶೌಚಾಲಯದ ಕೊರತೆಗಳು ಸಹಜ. ಸರ್ಕಾರಿ ಶಾಲೆಗಳೆಂದರೆ ಬಡವರ ಮಕ್ಕಳು ಓದುವ ಶಾಲೆ ಎಂಬುವುದು ತಪ್ಪು ಗ್ರಹಿಕೆ. ಪ್ರಸ್ತುತ ಸಾಲಿನಲ್ಲಿ ೭೭೦ ಮಕ್ಕಳಿರುವ ಹಾರಾಡಿ ಶಾಲೆಯೇ ಇದಕ್ಕೆ ಉತ್ತಮವಾದ ಉದಾಹರಣೆಯಾಗಿದೆ. ನಮ್ಮ ಕ್ಷೇತ್ರದ ಎಲ್ಲಾ ಸರ್ಕಾರಿ ಶಾಲೆಗಳು ಹಾರಾಡಿ ಶಾಲೆಯಂತಾಗಬೇಕಾಗಿದೆ. ಇದಕ್ಕೆ ಶಿಕ್ಷಕರ ಕೊಡುಗೆ ಅತೀ ಅಗತ್ಯವಾಗಿದೆ ಎಂದು ಅಶೋಕ್ ರೈ ಹೇಳಿದರು. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರ ಕೊರತೆ ಇದೆ. ವಿಷಯವಾರು ಶಿಕ್ಷಕ ನೇಮಕಾತಿ ಬಗ್ಗೆ ಸರ್ಕಾರದ ಜತೆ ಮಾತನಾಡುವುದಾಗಿ ತಿಳಿಸಿದ ಅವರು ಶಾಲೆಗಳ ಮೂಲಭೂತ ಸೌಕರ್ಯಗಳ ಒದಗಿಸುವಿಕೆಗೆ ಆದ್ಯತೆ ನೀಡುವುದಾಗಿ ತಿಳಿಸಿ ಶಾಲೆಗಳ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡಬೇಡಿ. ಶಿಕ್ಷಕರ ನಡುವೆ ಭಿನ್ನಾಭಿಪ್ರಾಯಗಳು ಉಂಟಾದಾಗ ಅದನ್ನು ಮೊದಲು ಸರಿಪಡಿಸಿಕೊಳ್ಳಿ ಎಂದು ಶಿಕ್ಷಕರಿಗೆ ಕಿವಿ ಮಾತು ಹೇಳಿದರು.
ಯುವಕರು ಪತ್ರಿಕೆ ಓದಿ..
ಸರ್ಕಾರಿ ವ್ಯವಸ್ಥೆಯಲ್ಲಿ ಬೇರೆ ಬೇರೆ ಇಲಾಖೆಗಳಲ್ಲಿ ಬಹಳಷ್ಟು ಹುದ್ದೆಗಳಿವೆ. ಆದರೆ ನಮ್ಮ ಯುವಕರಿಗೆ ಈ ಮಾಹಿತಿಯೇ ಗೊತ್ತಾಗುತ್ತಿಲ್ಲ. ಹುದ್ದೆಗಳಿಗೆ ಅರ್ಜಿ ಕರೆದರೂ ದಕ್ಷಿಣಕನ್ನಡದ ಯುವಕ-ಯುವತಿಯರು ಯಾರೂ ಅರ್ಜಿ ಸಲ್ಲಿಸುವುದೇ ಇಲ್ಲ. ಕಾರಣ ಅವರಿಗೆ ಮಾಹಿತಿಯ ಕೊರತೆ. ಅದಕ್ಕಾಗಿ ಯುವಕ-ಯುವತಿಯರು ಹೆಚ್ಚು ಪತ್ರಿಕೆಗಳನ್ನು ಓದಬೇಕು. ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಜತೆಗೆ ಸರ್ಕಾರಿ ಉದ್ಯೋಗ ಪಡೆದುಕೊಳ್ಳಲು ಮುಂದಾಗಬೇಕು ಎಂದ ಅವರು ಉದ್ಯೋಗಳತ್ತ ಯುವಜನತೆಯನ್ನು ಆಕರ್ಷಿಸಲು ಪ್ರತೀ ವರ್ಷವೂ ಉದ್ಯೋಗ ಮೇಳ ಹಾಗೂ ಮಾಹಿತಿ ಶಿಬಿರವನ್ನು ನಡೆಸುವುದಾಗಿ ಅವರು ಹೇಳಿದರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಪುತ್ತೂರು ಕ್ಷೇತ್ರದಲ್ಲಿ ಶೈಕ್ಷಣಿಕವಾದ ಅಭಿವೃದ್ಧಿಯಾಗುತ್ತಿದೆ. ಕಳೆದ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಸ್ವಲ್ಪದರಲ್ಲಿ ನಾವು ಜಿಲ್ಲೆಯಲ್ಲಿ ಮೊದಲ ಸ್ಥಾನ ಕಳೆದುಕೊಂಡಿದ್ದೇವೆ. ಮೌಲ್ಯಯುತ ಶಿಕ್ಷಣದಿಂದ ಮಕ್ಕಳ ಭವಿಷ್ಯತ್ತನ್ನು ರೂಪಿಸಲು ಸಾಧ್ಯವಾಗುತ್ತದೆ. ಮಾನವೀಯಗುಣಗಳನ್ನು ರೂಪಿಸಿಕೊಳ್ಳಲು ಮೌಲ್ಯಯುತ ಶಿಕ್ಷಣ ದೊರೆತಾಗ ಮಾತ್ರ ಸಾಧ್ಯ. ಆಂಗ್ಲ ಮಾಧ್ಯಮದ ವ್ಯಾಮೋಹದಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆ ಕಾಣುತ್ತಿದೆ. ಪೋಷಕರ ಈ ಮನೋಭಾವನೆ ಬದಲಾಗಬೇಕಿದೆ. ಶಿಕ್ಷಕರ ಚಟುವಟಿಕೆ ಮತ್ತು ಲವಲವಿಕೆಯಿಂದ ವಿದ್ಯಾರ್ಥಿಗಳ ಭವಿಷ್ಯ ರೂಪೀಕರಣಗೊಳ್ಳುತ್ತದೆ ಎಂದು ಹೇಳಿದರು.
ಶಾಲಾ ಆರಂಭೋತ್ಸವದAದು ಮೆರವಣಿಗೆ ಮೂಲಕ ಬಂದ ಮಕ್ಕಳನ್ನು ಆರತಿ ಬೆಳಗಿ, ಪುಷ್ಪವೃಷ್ಟಿಗೈದು ಶಿಕ್ಷಕಿಯರು ಶಾಲೆಗೆ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಶಾಸಕರು ಶಾಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತçಗಳನ್ನು ಸಾಂಕೇತಿಕವಾಗಿ ವಿತರಿಸಿದರು. ನೂತನ ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಶಾಲಾ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಸುಮಾರು ೧೦ ಲಕ್ಷ ವೆಚ್ಚದಲ್ಲಿ ನಿರ್ಮಿತವಾದ ನೂತನ ಶಾಲಾ ಕೊಠಡಿಯನ್ನು ಶಾಸಕ ಅಶೋಕ್ ರೈ ಲೋಕಾರ್ಪಣೆ ಮಾಡಿದರು.
ಸಭಾ ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯೆ ಪ್ರೇಮಲತಾ ನಂದಿಲ,ಹಾರಾಡಿ ಶಾಲಾ ಮುಖ್ಯ ಶಿಕ್ಷಕ ಕೆ.ಕೆ. ಮಾಸ್ತರ್ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್. ಆರ್., ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್ ಕುಮಾರ್ ರೈ, ಅಕ್ಷರ ದಾಸೋಹದ ಸಹಾಯಕ ನಿದೇಶಕ ನವೀನ್ ವೇಗಸ್ ಶಿಕ್ಷಣ ಇಲಾಖೆಯ ಹರಿಪ್ರಸಾದ್, ವಿಷ್ಣುಪ್ರಸಾದ್ ಉಪಸ್ಥಿತರಿದ್ದರು.