ತುಮಕೂರು: ಕಳೆದ ಕೆಲ ದಿನಗಳ ಹಿಂದೆ ಟಿಕ್ ಟಾಕ್ ಸ್ಟಂಟ್ ಮಾಡಲು ಪ್ರಯತ್ನಿಸಿ ಕುತ್ತಿಗೆ ಮೂಳೆ ಮುರಿದುಕೊಂಡಿದ್ದ ಯುವಕ ಭಾನುವಾರ ಮೃತಪಟ್ಟಿದ್ದಾನೆ. ಆ ಮೂಲಕ ರಾಜ್ಯದಲ್ಲಿ ಟಿಕ್‍ಟಾಕ್‍ಗೆ ಮೊದಲ ಬಲಿಯಾಗಿದೆ.
ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆಯ ಕುಮಾರ್ ಮೃತ ಯುವಕ. ಕುಮಾರ್ ಟಿಕ್‍ಟಾಕ್ ವಿಡಿಯೋ ಮಾಡುವಾಗ ಆಯ ತಪ್ಪಿ ತಲೆ ನೆಲಕ್ಕೆ ಬಿದ್ದಿದ್ದ. ಪರಿಣಾಮ ಸ್ಪೈನಲ್ ಕಾರ್ಡ್ (ಬೆನ್ನು ಮೂಳೆ) ಮುರಿದುಕೊಂಡಿತ್ತು. ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕುಮಾರ್ ಮೃತಪಟ್ಟಿದ್ದಾರೆ.
ಜೂನ್ 15ರಂದು ಕುಮಾರ್ ಸ್ನೇಹಿತನ ಜೊತೆಯಲ್ಲಿ ಟಿಕ್‍ಟಾಕ್ ಮಾಡಲು ಪ್ರಯತ್ನಿಸಿದ್ದ. ಅದರಂತೆ ದೂರದಿಂದ ಓಡಿ ಬಂದು ಕುಮಾರ್, ಮುಂದೆ ನಿಂತಿದ್ದ ಸ್ನೇಹಿತನ ಕೈ ಸಪೋರ್ಟ್ ನಿಂದ ಬ್ಯಾಕ್ ಜಂಪ್ ಮಾಡುತ್ತಾನೆ. ಆಗ ಕುಮಾರ್ ಆಯ ತಪ್ಪಿ ನೆಲಕ್ಕೆ ಬಿದ್ದಿದ್ದ. ಬಿದ್ದ ರಭಸಕ್ಕೆ ತಲೆ ಮೂಳೆ ಮತ್ತು ಬೆನ್ನು ಮೂಳೆಗಳು ಮುರಿದಿತ್ತು. ಕೂಡಲೇ ಆತನನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಟಿಕ್ ಟಾಕ್ ನಿಂದಾಗಿ ಈಗಾಗಲೇ ಹಲವು ಜೀವಗಳು ಬಲಿಯಾಗಿವೆ. ಹೀಗಾಗಿ ಇಂತಹ ಹುಚ್ಚಾಟಗಳಿಗೆ ಬಲಿಯಾಗದಂತೆ ಎಚ್ಚರವಹಿಸಬೇಕಾಗಿದೆ.