ಉಡುಪಿ ಜಿಲ್ಲಾ ಹೋಟೆಲ್ ಉದ್ದಿಮೆದಾರರ ಸಹಕಾರ ಸಂಘದ ಸ್ಥಳಾಂತರಗೊಂಡ ಕಚೇರಿಯ ಉದ್ಘಾಟನೆ 

ಉಡುಪಿ: ನಗರದ ರಾಜ್ ಟವರ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಿಲ್ಲಾ ಹೋಟೆಲ್ ಉದ್ದಿಮೆದಾರರ ಸಹಕಾರಿ ಸಂಘದ ಕಚೇರಿಯು ರವಿವಾರ ಪಿಪಿಪಿ ಕ್ರಾಸ್ ರಸ್ತೆಯ ಆಶಾ ಚಂದ್ರ ಟ್ರೇಡ್ ಸೆಂಟರ್ ಗೆ ಸ್ಥಳಾಂತರಗೊಂಡು ಉದ್ಘಾಟನೆಗೊಂಡಿತು.

ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ನೂತನ ಕಚೇರಿಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ಸಂಸ್ಥೆಯ ಉತ್ತರೋತ್ತರ ಅಭಿವೃದ್ಧಿಗೆ ಹಾರೈಸಿದರು.

ಶಾಸಕ ಯಶ್ ಪಾಲ್ ಎ. ಸುವರ್ಣ ಮಾತನಾಡಿ, ಹೋಟೆಲ್ ಉದ್ಯಮಕ್ಕೆ ಉಡುಪಿಯು ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದು, ಸಹಕಾರ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದೆ. ಹೋಟೆಲ್ ಉದ್ಯಮ, ಸಹಕಾರ ಕ್ಷೇತ್ರ ಒಟ್ಟಾಗಿ ಸಾಗುವ ಮೂಲಕ ಜಿಲ್ಲೆಯ ಆರ್ಥಿಕತೆಗೆ ಮಹತ್ವದ ಭಾಗವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿ ಶುಭ ಹಾರೈಸಿದರು.

.

ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಉಡುಪಿ ಜಿಲ್ಲೆಯು ಸಹಕಾರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಹೋಟೆಲ್ ಉದ್ಯಮಿಗಳ ಸಹಕಾರ ಸಂಘವು ಇದರಲ್ಲಿ ಭಾಗವಾಗಿರುವುದು ಸಹಕಾರ ಕ್ಷೇತ್ರಕ್ಕೆ ಇನ್ನಷ್ಟು ಬಲ ತುಂಬಿದಂತೆ. ಸಹಕಾರ ಕ್ಷೇತ್ರ ಜನರ ನಂಬಿಕೆ, ವಿಶ್ವಾಸದಿಂದ ಇನ್ನಷ್ಟು ವಿಶಾಲವಾಗಿ ಬೆಳೆಯಬೇಕು ಎಂದು ಹಾರೈಸಿದರು.

ಸುಸಜ್ಜಿತ ಕಚೇರಿ

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಡಾ|ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಹೋಟೆಲ್ ಉದ್ಯಮದಲ್ಲಿ ತೊಡಗಿ ಕೊಂಡವರು ಹಾಗೂ ಇತರ ಗ್ರಾಹಕರಿಗೆ ಸಾಲ ಸೌಲಭ್ಯ ಒದಗಿಸುವ ಉದ್ದೇಶದಿಂದ ಪ್ರಾರಂಭಗೊಂಡ ಸಂಘವು ಏಳು ವರ್ಷಗಳಿಂದ ಗ್ರಾಹಕರ ಸೇವೆಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಸುಸಜ್ಜಿತ ಕಚೇರಿಯನ್ನು ಆರಂಭಿಸಿದ್ದೇವೆ ಎಂದರು.

ಸಂಘದ ಉಪಾಧ್ಯಕ್ಷ ಕೆ. ನಾಗೇಶ್ ಭಟ್ ಸ್ವಾಗತಿಸಿ, ನಿರ್ದೇಶಕರಾದ ವಿ. ಚಂದ್ರಹಾಸ್ ಶೆಟ್ಟಿ ವಂದಿಸಿ, ಬಿ. ಅಶೋಕ್ ಪೈ ನಿರೂಪಿಸಿದರು.

ನಿರ್ದೇಶಕರಾದ ಲಕ್ಷ್ಮಣ ಜಿ. ನಾಯಕ್, ಎಂ. ಕೃಷ್ಣ ಆಳ್ವ, ಸುನಿಲ್ ಕುಮಾರ್ ಶೆಟ್ಟಿ, ಗಿರಿಜಾ ಎಸ್. ಶೆಟ್ಟಿ, ಶಿವಪ್ರಸಾದ್ ಎಸ್. ಶೆಟ್ಟಿ, ಕಟ್ಟಡದ ಮಾಲಕ ಮಮಕರ್ ಹೆಗ್ಡೆ ಉಪಸ್ಥಿತರಿದ್ದರು.