ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ: ಭುಗಿಲೆದ್ದ ಹಿಂಸಾಚಾರ; ಹಲವರಿಗೆ ಗಾಯ

ಕರಾಚಿ: ಮಂಗಳವಾರದಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಇಸ್ಲಾಮಾಬಾದ್‌ನಲ್ಲಿ ಬಂಧಿಸಲಾಗಿದ್ದು, ಇದರ ಹಿನ್ನೆಲೆಯಲ್ಲಿ ದೇಶಾದ್ಯಂತ ವ್ಯಾಪಕ ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸಲಾಯಿತು. ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್ ಅವರು ಅಲ್-ಖಾದಿರ್ ಟ್ರಸ್ಟ್ ಪ್ರಕರಣದ ವಿಚಾರಣೆಗೆ ಹಾಜರಾದ ಸಂದರ್ಭ ಇಸ್ಲಾಮಾಬಾದ್ ಹೈಕೋರ್ಟ್ ಆವರಣದಿಂದ ಅವರನ್ನು ಬಂಧಿಸಲಾಯಿತು.

ಮುಂದಿನ ಪ್ರಕ್ರಿಯೆಗಾಗಿ ಅವರನ್ನು ಇಂದು ಇಸ್ಲಾಮಾಬಾದ್‌ನ ಹೊಸ ಪೊಲೀಸ್ ಅತಿಥಿ ಗೃಹದಲ್ಲಿ ಹಾಜರುಪಡಿಸಲಾಗುತ್ತದೆ. ಪಾಕ್ ಮಾಜಿ ಪ್ರಧಾನಿಯನ್ನು ಫೆಡರಲ್ ಪ್ಯಾರಾಮಿಲಿಟರಿ ಕಾನೂನು ಜಾರಿ ಸಂಸ್ಥೆ ಪಾಕಿಸ್ತಾನ ರೇಂಜರ್ಸ್ ಬಂಧಿಸಿದೆ. ಕೋರ್ಟಿನ ಬಯೋಮೆಟ್ರಿಕ್ ಕೋಣೆಯಲ್ಲಿದ್ದ ಪಾಕ್ ಮಾಜಿ ಪ್ರಧಾನಿಯನ್ನು ಬಂಧಿಸಲು ಬಂದಾಗ ಪಿಟಿಐ ಕಾರ್ಯಕರ್ತರು ಬಾಗಿಲು ತೆರೆಯಲು ನಿರಾಕರಿಸಿದ್ದು, ರೇಂಜರ್‌ಗಳು ಕೋಣೆಯೊಳಗೆ ಪ್ರವೇಶಿಸಲು ಗಾಜಿನ ಕಿಟಕಿಗಳನ್ನು ಒಡೆದರು ಎಂದು ವೀಡಿಯೊಗಳು ತೋರಿಸಿವೆ.

ಇಮ್ರಾನ್ ಖಾನ್ ಬಂಧನ ವಿರೋಧಿಸಿ ದೇಶದ ಹಲವಾರು ಭಾಗಗಳಲ್ಲಿ ಪ್ರತಿಭಟನಾಕಾರರು ಬೀದಿಗಿಳಿದು, ಪೊಲೀಸರು ಮತ್ತು ಇತರ ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿದ್ದಾರೆ. ಕ್ವೆಟ್ಟಾದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ. ಕರಾಚಿ, ಪೇಶಾವರ, ರಾವಲ್ಪಿಂಡಿ ಮತ್ತು ಲಾಹೋರ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.