ಉಡುಪಿ: ಯಕ್ಷಗಾನ ಪ್ರದರ್ಶನ, ಕಲೆ, ಕಲಾವಿದರ ಕ್ಷೇಮ ಚಿಂತನೆ, ಕಲಿಕೆ, ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಥಿಕ ನೆರವು, ಮಾರ್ಗದರ್ಶನ, ಸಮಾಜದಲ್ಲಿ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿರುವ ಯಕ್ಷಗಾನ ಕಲಾರಂಗಕ್ಕೆ ಮುಂದಿನ ಕಾರ್ಯ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಮಾಹೆ ವಿಶ್ವವಿದ್ಯಾನಿಲಯವು 50 ಲಕ್ಷ ರೂ.ನೆರವನ್ನು ಮಾಹೆ ವಿ.ವಿ.ಯ ಆಡಳಿತ ಸೌಧದಲ್ಲಿ ಗುರುವಾರ ವಿತರಿಸಿದೆ.
ಬೆಂಗಳೂರು ಎಂಇಎಂಜಿ ಅಧ್ಯಕ್ಷ, ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಕುಲಸಚಿವ ಡಾ| ರಂಜನ್ ಆರ್. ಪೈ ಅವರು ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಅವರಿಗೆ ಚೆಕ್ ಹಸ್ತಾಂತರಿಸಿದರು. ಸಂಸ್ಥೆಯ ಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಮುಂದಿನ 5 ವರ್ಷ ತಲಾ 10 ಲಕ್ಷ ರೂ.ನಂತೆ ನೀಡುವುದಾಗಿ ಭರವಸೆ ನೀಡಿದರು.
ಕುಲಪತಿ ಡಾ| ಎಂ.ಡಿ. ವೆಂಕಟೇಶ್, ಸಹಕುಲಪತಿ ಡಾ| ನಾರಾಯಣ ಸಭಾಹಿತ್ ಉಪಸ್ಥಿತರಿದ್ದರು. ಕಲಾರಂಗದ ವತಿಯಿಂದ ಡಾ| ರಂಜನ್ ಆರ್. ಪೈ ಹಾಗೂ ಮಾಹೆ ವಿ.ವಿ. ಸಹ
ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಅವರನ್ನು ಗೌರವಿಸಲಾಯಿತು.
ಕಲಾರಂಗದ ಉಪಾಧ್ಯಕ್ಷರಾದ ಎಸ್.ವಿ. ಭಟ್, ಪಿ. ಕಿಶನ್ ಹೆಗ್ಡೆ, ವಿ.ಜಿ. ಶೆಟ್ಟಿ, ಕೋಶಾಧಿಕಾರಿ ಪ್ರೊ| ಕೆ. ಸದಾಶಿವ ರಾವ್, ಬಿ. ಭುವನ ಪ್ರಸಾದ್ ಹೆಗ್ಡೆ, ಜತೆಕಾರ್ಯದರ್ಶಿಗಳಾದ ನಾರಾಯಣ ಎಂ. ಹೆಗಡೆ, ಎಚ್.ಎನ್. ಶೃಂಗೇಶ್ವರ ಭಾಗವಹಿಸಿದ್ದರು. ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಗೈದರು.