777 ಚಾರ್ಲಿ ಚಿತ್ರದ ಯಶಸ್ಸಿಗೆ ಮತ್ತೊಂದು ಗರಿ: ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಸ್ತಿಗೆ ಭಾಜನರಾದ ಕಿರಣ್ ರಾಜ್ ಕೆ

ಕನ್ನಡದ ಭರವಸೆಯ ನಿರ್ದೇಶಕರಲ್ಲಿ ಒಬ್ಬರಾದ ಕಿರಣ್ ರಾಜ್ ಕೆ ತಮ್ಮ ಚೊಚ್ಚಲ ನಿರ್ದೇಶನದಲ್ಲಿಯೇ ತಾವೇನನ್ನುವುದನ್ನು ತೋರಿಸಿಕೊಟ್ಟಿದ್ದರು. ಜಗತ್ತಿನಾದ್ಯಂತ ಪ್ರಾಣಿಪ್ರೇಮಿಗಳನ್ನು ಆಕರ್ಷಿಸಿದ 777 ಚಾರ್ಲಿ ಚಿತ್ರದ ಶ್ರೇಯಸ್ಸು, ಚಾರ್ಲಿಗೆ ಎಷ್ಟು ಸಲ್ಲಬೇಕೋ ಈ ಚಿತ್ರವನ್ನು ಮನೋಜ್ಞವಾಗಿ ಚಿತ್ರಿಸಿದ ಕಿರಣ್ ರಾಜ್ ಗೂ ಅಷ್ಟೇ ಸಲ್ಲಬೇಕು.

ಈ ಚಿತ್ರದಲ್ಲಿನ ಅವರ ಶ್ಲಾಘನೀಯ ಕಾರ್ಯವನ್ನು ಗುರುತಿಸಿ, ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದ 13 ನೇ ಆವೃತ್ತಿಯು ಕಿರಣ್ ರಾಜ್ ಕೆ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕಿರಣ್ ರಾಜ್, ತಮ್ಮ ಹರ್ಷವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಚಿತ್ರದ ಮೇಲೆ ಪ್ರೀತಿಯ ಸುರಿಮಳೆಗೈದವರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ರಕ್ಷಿತ್ ಶೆಟ್ಟಿ ಧರ್ಮ ಪಾತ್ರದಲ್ಲಿ ನಟಿಸಿ, ಪರಂವಾಃ ನಿರ್ಮಾಣದ ಈ ಚಿತ್ರವು ಅನೇಕ ಭಾಷೆಗಳಲ್ಲಿ ತೆರೆಕಂಡು ಗಲ್ಲಾಪೆಟ್ಟಿಗೆಯಲ್ಲೂ ಭರ್ಜರಿ ಯಶಸ್ಸು ಕಂಡಿತ್ತು. ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗೌರವಕ್ಕಾಗಿ ನಿರ್ದೇಶಕ ಕಿರಣ್ ಅವರನ್ನು ರಕ್ಷಿತ್ ಶೆಟ್ಟಿ ಅಭಿನಂದಿಸಿದ್ದಾರೆ.

ಭಾರತದಲ್ಲಿನ ಹಲವಾರು ವಿಲಕ್ಷಣ ಮತ್ತು ಕಠಿಣ ಸ್ಥಳಗಳಲ್ಲಿ ಚಿತ್ರೀಕರಿಸಲಾದ 777 ಚಾರ್ಲಿ ಚಲನಚಿತ್ರ ತಂಡದ ಶ್ರಮವು ಈ ಮೂಲಕ ಸಾರ್ಥಕ್ಯ ಕಂಡಿದೆ.

777 ಚಾರ್ಲಿ ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ಜೂನ್ 10, 2022 ರಂದು ಬಹು ಭಾರತೀಯ ಭಾಷೆಗಳಲ್ಲಿ ಬಿಡುಗಡೆಯಾಯಿತು ಮತ್ತು ಎಲ್ಲಾ ಮೂಲೆಗಳಿಂದ ಪ್ರಶಂಸೆ ಗಳಿಸಿತು. ಚಿತ್ರವು ರೂ. 105 ಕೋಟಿ ರೂ. ಗಳಿಕೆಯನ್ನೂ ಮಾಡಿದೆ.

ಭಾರತೀಯ ಚಿತ್ರರಂಗದ ಪಿತಾಮಹ ಎಂದೇ ಗುರುತಿಸಲಾದ ಧುಂಡಿರಾಜ್ ಗೋವಿಂದ್ ಫಾಲ್ಕೆ ಅಥವಾ ದಾದಾಸಾಹೇಬ್ ಫಾಲ್ಕೆ ಅವರ 153ನೇ ಜನ್ಮದಿನದ ಅಂಗವಾಗಿ ಏಪ್ರಿಲ್ 30 ರಂದು 13ನೇ ದಾದಾ ಸಾಹೇಬ್ ಫಾಲ್ಕೆ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ವಾರ್ಷಿಕ ಉತ್ಸವದಲ್ಲಿ ಚಲನಚಿತ್ರಗಳು, ಕಿರುಚಿತ್ರಗಳು, ಸಾಕ್ಷ್ಯಚಿತ್ರಗಳು, ಅನಿಮೇಷನ್‌ಗಳು, ಸಂಗೀತ ವೀಡಿಯೊಗಳು ಮತ್ತು ಜಾಹೀರಾತು ಸೇರಿದಂತೆ ವಿವಿಧ ಚಲನಚಿತ್ರ ನಿರ್ಮಾಣ ವಿಭಾಗಗಳ ಕೆಲವು ಅತ್ಯುತ್ತಮ ಪ್ರತಿಭೆಗಳನ್ನು ಗೌರವಿಸಲಾಗುತ್ತದೆ.