ಸಂಘಟನೆಯಲ್ಲಿ ಬಲವಿದೆ ಎಂದು ಸಾಧಿಸಿ ತೋರಿದ ಸ್ವರ್ಣೋದ್ಯಮ ಸಂಘಟನಾ ಚತುರ ನೋವೆಲ್ಟಿ ಸಂಸ್ಥೆಯ ಜಿ.ಜಯ ಆಚಾರ್ಯ

ನೋವೆಲ್ಟಿ ಸ್ಟೋರ್ಸ್ ನ ಸಂಸ್ಥಾಪಕ ಜಿ. ಅನಂತಕೃಷ್ಣ ಆಚಾರ್ಯರ 4 ನೇ ಪುತ್ರ ಜಯ ಆಚಾರ್ಯರು ಪ್ರಾರಂಭದಲ್ಲಿ ಚಿತ್ರರಂಗದತ್ತ ಒಲವು ಹೊಂದಿದ್ದರು. ಬೆಂಗಳೂರಿನಲ್ಲಿರುವ ಆರ್. ನಾಗೇಂದ್ರರಾಯರ ಆದರ್ಶ್ ಫಿಲ್ಮ್ ಇನ್ಸ್ಟಿಟ್ಯೂಟ್ ಸೇರಿ, ಡಿ.ಎಫ್.ಟಿ ಕೋರ್ಸ್ ಪೂರೈಸಿ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರೊಂದಿಗೆ ಸಹ ನಿರ್ದೇಶಕರಾಗಿ ದುಡಿದ ಅನುಭವವಿದೆ. ಕನ್ನಡ ಚಿತ್ರರಂಗದ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಧರಣಿ ಮಂಡಲ ಮಧ್ಯದೊಳಗೆ ಚಿತ್ರದಲ್ಲಿ ನಟಿಸಿಯೂ ಇದ್ದಾರೆ. ತದನಂತರ ಜಿ.ವಿ.ಅಯ್ಯರ್ ರವರ ಮಧ್ವಾಚಾರ್ಯ ಚಿತ್ರದಲ್ಲೂ ಪರ್ಷಿಯನ್ ದೊರೆಯ ಪಾತ್ರದಲ್ಲಿ ಮಿಂಚಿದ್ದಾರೆ.

ಇನ್ನೇನು ತಮಿಳು ಚಿತ್ರದಲ್ಲಿ ನಾಯಕ ನಟನಾಗುವ ಅವಕಾಶ ಸಿಕ್ಕಿತೆನ್ನುವಾಗ ತಂದೆಯವರು ಪಾರಂಪರಿಕ ಚಿನ್ನದ ಮಳಿಗೆಯನ್ನು ನೋಡಿಕೊಳ್ಳುವಂತೆ ಆಜ್ಞಾಪಿಸಿದ್ದರಿಂದ ಪಿತೃವಾಕ್ಯವನ್ನು ಪರಿಪಾಲಿಸಿ ಉದ್ಯಮಕ್ಕೆ ಧುಮುಕಿದರು. ತಂದೆಯವರು ಸ್ಥಾಪಿಸಿದ “ಬುಲಿಯನ್ ಅಸೋಸಿಯೇಶನ್” ಮುಂದೆ “ಉಡುಪಿ ಜ್ಯುವೆಲ್ಲರ್ಸ್ ಅಸೋಸಿಯೇಶನ್” ಎಂದು ಮರುನಾಮಕರಣಗೊಂಡಿತು. ಸರಿಸುಮಾರು 13 ವರ್ಷ ಇದರ ಅಧ್ಯಕ್ಷರಾಗಿ ದುಡಿದು ಸಂಸ್ಥೆಯನ್ನು ಉನ್ನತಿಗೇರಿಸಿದರು.

ಫೆಡರೇಶನ್ ಸ್ಥಾಪನೆಯ ಮಹೋನ್ನತ ಕಾರ್ಯ

ರಾಜ್ಯದ ಎಲ್ಲಾ ಚಿನ್ನ ನಿರ್ಮಾತೃಗಳ ಸಂಪರ್ಕ ಸಾಧಿಸಿ ರಾಜ್ಯಮಟ್ಟದ ಫೆಡರೇಶನ್ ಸ್ಥಾಪಿಸಿ ಒಂದು ದಶಕಗಳವರೆಗೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಲ್ಲದೆ, ರಾಜ್ಯಾದ್ಯಂತ “ಏಕರೂಪಿ ಚಿನ್ನದ ಧಾರಣೆ”ಯನ್ನು ಜಾರಿಗೆ ತಂದ ಕೀರ್ತಿಗೆ ಭಾಜನರು. ಕೇಂದ್ರ ಸರಕಾರದ ಅಧೀನದಲ್ಲಿರುವ ‘ನ್ಯಾಶನಲ್ ಜೆಮ್ ಎಂಡ್ ಜುವೆಲರಿ ಕೌನ್ಸಿಲ್ ಆಫ್ ಇಂಡಿಯಾ’ ಸಂಸ್ಥೆಗೆ ಆಯ್ಕೆಯಾಗಿ ಸ್ವರ್ಣೋದ್ಯಮ ಎದುರಿಸುವ ಜಿ.ಎಸ್.ಟಿ, ಹಾಲ್ ಮಾರ್ಕ್, ಪ್ಯಾನ್ ಕಾರ್ಡ್, ಪೊಲೀಸ್ ದೌರ್ಜನ್ಯ ಇತ್ಯಾದಿ ಸಮಸ್ಯೆಗಳ ವಿರುದ್ದ ಹೋರಾಡಿದರು.

ಚಿನ್ನ ಮಾರಾಟದ ಮೇಲೆ ಶೇ. 3 ವ್ಯಾಟ್ ಇದ್ದಾಗ ಜಯ ಆಚಾರ್ಯರ ನೇತೃತ್ವದ ನಿಯೋಗವೊಂದು ಅಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ಮನವೊಲಿಸಿ ಶೇ.1 ಇಳಿಸುವಲ್ಲಿ ಸಫಲರಾಗಿದ್ದರು. ಇದಲ್ಲದೆ, ಕೇಂದ್ರದ ಕನಿಷ್ಠ 5% ಹಾಗೂ ಗರಿಷ್ಟ 28% ಜಿ.ಎಸ್.ಟಿ ಅನ್ನು ಇತರ ರಾಜ್ಯಗಳ ಫೆಡರೇಶನ್ ಜೊತೆ ಸೇರಿ 3% ಕ್ಕೆ ಇಳಿಸುವಲ್ಲಿಯೂ ಸಹಕರಿಸಿದ್ದರು.

ಪಶಸ್ತಿಗಳು

  • 2022 ರಲ್ಲಿ ಪ್ರೈಡ್ ಆಫ್ ಇಂಡಿಯಾ ಸಂಸ್ಥೆಯಿಂದ ಕೊಡಲ್ಪಡುವ ಜೀವಮಾನ ಸಾಧನಾ ಪ್ರಶಸ್ತಿ
  • 2019 ರಲ್ಲಿ ಜೆಮ್ ಆಫ್ ದ ಸೌತ್ ಹಾಗೂ ಟರ್ಕಿಯ ಇಸ್ತಾಂಬುಲ್ ನ ಬೆಹೆಟ್ ನಹೀನ್ ಮೆಸೊಪೊಟೋಮಿಯನ್ ಅಕಾಡೆಮಿ ಆಫ್ ಆರ್ಟ್ಸ್ ಎಂಡ್ ಸೈನ್ಸ್ ನಿಂದ ಸಮಾಜ ಸೇವೆಗಾಗಿ ಗೌರವ ಡಾಕ್ಟರೇಟ್
  • 2014 ರಲ್ಲಿ ಜಿಜೆಟಿಸಿಎಲ್ ಎಕ್ಸಲೆನ್ಸ್ ಅವಾರ್ಡ್
  • 2011 ರಲ್ಲಿ ಸೌತ್ ಜ್ಯುವೆಲ್ಲರ್ಸ್ ಅವಾರ್ಡ್