ಸುಖೋಯ್ ಯುದ್ದವಿಮಾನದಲ್ಲಿ ಹಾರಾಟ ನಡೆಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ತಮ್ಮ ಚೊಚ್ಚಲ ಫೈಟರ್ ಜೆಟ್ ಹಾರಾಟ ನಡೆಸಿದರು. ಅಸ್ಸಾಂನ ಆಯಕಟ್ಟಿನ ವಾಯುನೆಲೆಯಾದ ತೇಜ್‌ಪುರ್ ಏರ್‌ಫೋರ್ಸ್ ಸ್ಟೇಷನ್‌ನಲ್ಲಿ ಸುಖೋಯ್ 30 MKI ಯುದ್ಧ ವಿಮಾನದಲ್ಲಿ ದ್ರೌಪದಿ ಮುರ್ಮು ಹಾರಾಟ ನಡೆಸಿದ್ದಾರೆ.

Image

ಭಾರತೀಯ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿರುವ ರಾಷ್ಟ್ರಪತಿಗಳು, ಬ್ರಹ್ಮಪುತ್ರ ಮತ್ತು ತೇಜ್‌ಪುರ ಕಣಿವೆಯ ಮೇಲೆ ಸುಮಾರು 30 ನಿಮಿಷಗಳ ಕಾಲ ಹಾರಾಟ ನಡೆಸಿ ವಾಯುಪಡೆಯ ನಿಲ್ದಾಣಕ್ಕೆ ಮರಳಿದರು.

ಹಾರಾಟದ ಬಗ್ಗೆ ಪ್ರತಿಕ್ರಿಯಿಸಿದ ಮುರ್ಮು, “ಅಚ್ಛಾ ಲಗಾ” ಎಂದಿದ್ದಾರೆ. ಅಸ್ಸಾಂನಲ್ಲಿ ಮೂರು ದಿನಗಳ ಪ್ರವಾಸದಲ್ಲಿರುವ ಮುರ್ಮು ಗುವಾಹಟಿಯಿಂದ ತೇಜ್‌ಪುರ ತಲುಪಿದರು. ಏರ್‌ ಮಾರ್ಷಲ್‌ ಎಸ್‌ಪಿ ಧಾರ್ಕರ್‌, ಗವರ್ನರ್‌ ಗುಲಾಬ್‌ ಚಂದ್‌ ಕಟಾರಿಯಾ ಮತ್ತು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಏರ್‌ ಬೇಸ್‌ನಲ್ಲಿ ಬರಮಾಡಿಕೊಂಡರು.

Image

106 ಸ್ಕ್ವಾಡ್ರನ್‌ನ ಕಮಾಂಡಿಂಗ್ ಆಫೀಸರ್ ಗ್ರೂಪ್ ಕ್ಯಾಪ್ಟನ್ ನವೀನ್ ಕುಮಾರ್ ಅವರು ವಿಮಾನವನ್ನು ಹಾರಿಸಿದರು. ವಿಮಾನವು ಸಮುದ್ರ ಮಟ್ಟದಿಂದ ಸುಮಾರು ಎರಡು ಕಿಲೋಮೀಟರ್ ಎತ್ತರದಲ್ಲಿ ಮತ್ತು ಗಂಟೆಗೆ ಸುಮಾರು 800 ಕಿಲೋಮೀಟರ್ ವೇಗದಲ್ಲಿ ಹಾರಿತು. ರಾಷ್ಟ್ರಪತಿ ಮುರ್ಮು ಅವರು ಯುದ್ದ ವಿಮಾನದಲ್ಲಿ ಹಾರಾಟ ನಡೆಸಿದ ಮೂರನೇ ರಾಷ್ಟ್ರಪತಿ ಮತ್ತು ಎರಡನೇ ಮಹಿಳಾ ರಾಷ್ಟ್ರಪತಿಯಾಗಿದ್ದಾರೆ.