ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ 52 ರ ಬಾಳೆಬರೆ ಘಾಟ್ ನಲ್ಲಿ ಕಾಂಕ್ರೀಟ್ ಪೇವ್ ಮೆಂಟ್ ಕಾಮಗಾರಿಯ ನಿರೀಕ್ಷಿತ ಪ್ರಗತಿಯಲ್ಲಿ ವ್ಯತ್ಯಯವಾಗಿರುವುದರಿಂದ ಬಾಳೆಬರೆ ಘಾಟ್ ನಲ್ಲಿ ವಾಹನ ಸಂಚಾರಕ್ಕೆ ಇದ್ದ ನಿಷೇಧವನ್ನು 10 ದಿನಗಳ ಕಾಲ ವಿಸ್ತರಿಸಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಆದೇಶ ಹೊರಡಿಸಿದ್ದಾರೆ.
ಹೆದ್ದಾರಿ ಕಾಮಗಾರಿಗಾಗಿ ಎಪ್ರಿಲ್ 05 ರ ವರೆಗೆ ಬಾಳೆಬರೆ ಘಾಟ್ ನಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು. ಇದೀಗ ಕ್ಯೂರಿಂಗ್ ಗೆ ಇನ್ನೂ ಕೆಲವು ದಿನಗಳ ಕಾಲಾವಕಾಶ ಅಗತ್ಯವಾಗಿರುವುದರಿಂದ ವಾಹನ ಸಂಚಾರದ ನಿಷೇಧವನ್ನು ಎಪ್ರಿಲ್ 15 ರವರೆಗೆ ಮುಂದುವರೆಸಲಾಗಿದ್ದು, ವಾಹನ ಸವಾರರಿಗೆ ಬದಲಿ ಮಾರ್ಗ ಸೂಚಿಸಲಾಗಿದೆ.
ತೀರ್ಥಹಳ್ಳಿ ಮೂಲಕ ಕುಂದಾಪುರ ಕಡೆಗೆ ಸಂಚರಿಸುವ ಲಘು ವಾಹನಗಳು ತೀರ್ಥಹಳ್ಳಿ – ಹಾಲಾಡಿ – ಬಸ್ರೂರು – ಕುಂದಾಪುರ, ಭಾರಿ ವಾಹನಗಳು ತೀರ್ಥಹಳ್ಳಿ- ಹೆಬ್ರಿ – ಉಡುಪಿ – ಕುಂದಾಪುರ ಮೂಲಕ ಸಂಚರಿಸಲು ಸೂಚಿಸಲಾಗದೆ. ತೀರ್ಥಹಳ್ಳಿ – ಯಡೂರು – ಹುಲಿಕಲ್ – ಕುಂದಾಪುರ ಕಡೆಗೆ ಹೋಗುವ ವಾಹನಗಳು ತೀರ್ಥಹಳ್ಳಿ – ಯಡೂರು – ಮಾಸ್ತಿಕಟ್ಟೆ- ನಗರ – ಕೊಲ್ಲೂರು –ಕುಂದಾಪುರ ಮೂಲಕ ಸಂಚರಿಸಬೇಕು. ಹೊಸನಗರ – ನಗರ – ಕೊಲ್ಲೂರು – ಕುಂದಾಪುರ ರಸ್ತೆಯಲ್ಲಿ ಭಾರಿ ಸರಕು ವಾಹನಗಳಾದ ಮಲ್ಟಿ ಆಕ್ಸೆಲ್ ಹೊರತುಪಡಿಸಿ ಲಘು ಸರಕು ವಾಹನಗಳು ಮಾತ್ರ ಸಂಚರಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.