ಉಡುಪಿ: ನಗರದ ಪಣಿಯಾಡಿಯಲ್ಲಿ ರಾಷ್ಟ್ರ ಪಕ್ಷಿ ನವಿಲು ಜನ ವಸತಿ ಪ್ರದೇಶದಲ್ಲಿ ಅಸ್ಪಸ್ಥಗೊಂಡಂತೆ ಸೋಮವಾರ ಬೆಳಗ್ಗೆ ಕಂಡು ಬಂತು. ಕೂಡಲೇ ಸ್ಥಳೀಯರು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ರವಾನಿಸಿದ್ದಾರೆ.ಸ್ಥಳೀಯರ ಮಾಹಿತಿಯ ಮೇರೆಗೆ ಸಳಾಕಾಗಮಿಸಿದ ನಿತ್ಯಾನಂದ ಬಳಕಾಡುವರು ನವಿಲಿನ ದೇಹವನ್ನು ಪರಿಶೀಲಿಸಿದಾಗ ನವಿಲು ಮೃತಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ .ಕಳೆದ ರಾತ್ರಿ ಹಾರುವ ಸಂದರ್ಭ ನವಿಲು ವಿದ್ಯುತ್ ತಂತಿಗೆ ಸಿಲುಕಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ನವಿಲಿನ ಕಳೇಬರವನ್ನು ನಿತ್ಯಾನಂದ ಒಳಕಾಡು ಸ್ಥಳದಿಂದ ರವಾನಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕ ಮಾಡಿ ಮೃತದೇಹವನ್ನು ಮಣಿಪಾಲದ ತಿಮ್ಮಕ್ಕ ಟ್ರೀ ಪಾರ್ಕ್ ನಲ್ಲಿ ಕಾರ್ಯಾಚರಿಸುವ ಗಸ್ತು ಅರಣ್ಯಾಧಿಕಾರಿ ಪಾಣ ಎಂಬವರಿಗೆ ಹಸ್ತಾಂತರ ಮಾಡಿದ್ದಾರೆ. ರಾಷ್ಟ್ರೀಯ ಪಕ್ಷಿ ನವಿಲು ಮತ್ತಿತರ ಪ್ರಾಣಿಗಳು ಅವಘಡದಿಂದ ಮೃತಪಟ್ಟರೆ ಅದನ್ನು ಅಂತ್ಯಸಂಸ್ಕಾರ ಮಾಡಬಾರದು ಎಂದು ಇತ್ತೀಚೆಗೆ ಕೇಂದ್ರ ಸರ್ಕಾರ ಆದೇಶ ಮಾಡಿತ್ತು. ಈ ಹಿಂದೆ ಅಗ್ನಿಚಿತೆ ನಿರ್ಮಾಣ ಮಾಡಿ, ಹೂಳುವ ಮೂಲಕ ಗೌರವಯುತ ಅಂತ್ಯಸಂಸ್ಕಾರ ನಡೆಸಲಾಗುತ್ತಿತ್ತು. ಇತ್ತೀಚಿನ ನಿಯಮದ ಪ್ರಕಾರ ಮೃತ ಪ್ರಾಣಿಯನ್ನು ಕಾಡಿನಂಚಿನಲ್ಲಿ ಇಡಬೇಕು. ಕಾಡು ಪ್ರಾಣಿಗಳು ಬಂದು ಸತ್ತ ಪ್ರಾಣಿಯನ್ನು ಆಹಾರವಾಗಿ ಸ್ವೀಕರಿಸಬೇಕು ಎಂಬ ಆದೇಶವಿದೆ. ನಿಯಮದಂತೆ ನಿತ್ಯಾನಂದ ಒಳಕಾಡು ಅರಣ್ಯ ಅಧಿಕಾರಿಗಳಿಗೆ ನವಿಲಿನ ಮೃತ ದೇಹವನ್ನು ಹಸ್ತಾಂತರ ಮಾಡಿದ್ದಾರೆ.