ಸೆಟ್ಟೇರುವುದಕ್ಕೂ ಮುನ್ನವೇ ವಿವಾದ ಸುಳಿಯಲ್ಲಿ ಕಾಂತಾರ-2: ನಿತ್ಯವೂ ದೈವಕ್ಕೆ ಅಪಚಾರ ನಡೆಯುತ್ತಿರುವುದನ್ನು ನೋಡಿ ಬೇಸತ್ತ ತುಳುವರು

ಬೆಂಗಳೂರು: ದೇಶ ಮಾತ್ರವಲ್ಲ ವಿದೇಶಗಳಲ್ಲೂ ತುಳುನಾಡಿನ ಕೀರ್ತಿ ಪತಾಕೆಯನ್ನು ಹಾರಿಸಿದ ಕಾಂತಾರ ಚಲನಚಿತ್ರವು ಒಂದಲ್ಲ ಒಂದು ವಿವಾದದ ಸುಳಿಯಲ್ಲಿ ಸಿಲುಕಿ ಹಾಕಿಕೊಳ್ಳುತ್ತಲೇ ಬಂದಿದೆ. ವರಾಹರೂಪಂ ಹಾಡಿನ ಮೇಲೆ ಕೃತಿ ಚೌರ್ಯದ ಆರೋಪದಿಂದ ಹಿಡಿದು ದೈವಾರಾಧನೆಗೆ ಅಪಚಾರ ಮಾಡಿದ ಆರೋಪದವರೆಗೆ ಕಾಂತಾರ ಚಿತ್ರ ಮತ್ತು ಅದರ ನಿರ್ಮಾತೃಗಳ ಸುತ್ತ ಒಂದಲ್ಲಾ ಒಂದು ರೀತಿಯಲ್ಲಿ ವಿವಾದಗಳು ಸುತ್ತಿಕೊಂಡಿವೆ.

ಇದೀಗ ಈ ಆರೋಪಕ್ಕೆ ಹೊಸ ಸೇರ್ಪಡೆಯಾಗಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಗಂಗಮ್ಮ ತಾಯಿಗೆ ಪಂಜುರ್ಲಿ ದೈವದದಂತೆ ಅಲಂಕಾರ ಮಾಡಿರುವುದು ತುಳುವರ ಕೋಪಕ್ಕೆ ಕಾರಣವಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಫೋಟೋ ವೈರಲ್‌ ಆಗಿದ್ದು, ಜನರು ರಿಷಬ್‌ ಶೆಟ್ಟಿ ಬಗ್ಗೆ ಕೆಂಡಾಮಂಡಲವಾಗಿದ್ದಾರೆ.

ಗಂಗಮ್ಮ ದೇವಿಗೆ ಪಂಜುರ್ಲಿ ಅಲಂಕಾರ
Credits: Roshan Renold Facebook

‘ಕಾಂತಾರ’ ಸಿನಿಮಾ ಬಿಡುಗಯಾದಾಗಿನಿಂದ ಇಂತಹ ಅವಾಂತರಗಳು ನಡೆಯುತ್ತಿವೆ. ‘ಕಾಂತಾರ 2’ ಚಿತ್ರಕ್ಕಾಗಿ ಕಥೆ ಬರೆಯುವ ಕೆಲಸಗಳು ನಡೆಯುತ್ತಿದ್ದು ಕೆಲವು ತಿಂಗಳುಗಳಲ್ಲಿ ಆ ಸಿನಿಮಾ ಕೂಡಾ ತೆರೆ ಕಾಣಬಹುದು. ಕರಾವಳಿಯಲ್ಲಿ ಬಹಳ ಆದರದಿಂದ ನೋಡುವ ದೈವಾರಾಧನೆ ಈಗ ಹಣ ಮಾಡುವ ದಂಧೆಯಾಗಿದ್ದು ಸಂಬಂಧವೇ ಇಲ್ಲದ ಕಡೆಗಳಲ್ಲೂ ಆಚರಣೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇದು ಎತ್ತ ಸಾಗಲಿದೆ ಅನ್ನುವ ಆತಂಕ ವ್ಯಕ್ತಪಡಿಸಿರುವ ತುಳುವರು ‘ಕಾಂತಾರ 2’ ಸಿನಿಮಾವನ್ನು ಬ್ಯಾನ್‌ ಮಾಡುವ ಮೂಲಕ ತುಳುನಾಡಿನ ಸಂಸ್ಕೃತಿಯನ್ನು ಕಾಪಾಡಬೇಕು ಎಂದು ದೈವಾರಾಧಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇಷ್ಟೆಲ್ಲಾ ಅಪಚಾರ ನಡೆಯುತ್ತಿದ್ದರೂ, ‘ಕಾಂತಾರ’ ತಂಡ ಮಾತ್ರ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಕೆಲವು ದಿನಗಳ ಹಿಂದೆಯೂ ಜನರು ಆರೋಪಿಸಿದ್ದರು. ಸಿನಿಮಾ ಮಾಡಿ ಕೋಟ್ಯಂತರ ರೂಪಾಯಿ ಲಾಭ ಮಾಡಿಕೊಂಡ ‘ಕಾಂತಾರ’ ತಂಡ, ಈಗ ದೈವಾರಾಧನೆಯನ್ನು ಈ ರೀತಿ ಬಳಕೆ ಮಾಡಿಕೊಳ್ಳುವವರ ವಿರುದ್ಧ ಮಾತನಾಡದೆ ಮೌನವಾಗಿದೆ ಎಂದು ಜನರು ಬೇಸರ ವ್ಯಕ್ತಪಡಿಸಿದ್ದಾರೆ. ದೈವಾರಾಧನೆಯು ತುಳುವ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು, ಇದರಲ್ಲಿ ನಂಬಿಕೆ ಇರುವವರು ಇಂತಹ ಅಪಚಾರಗಳನ್ನು ಸಹಿಸಿಕೊಳ್ಳಲಾರರು. ಅಂತೂ ಕಾಂತಾರ-1ರ ಯಶಸ್ಸಿನ ಜೊತೆಗೆ ಅಪವಾದಗಳೂ ಅದರ ಬೆನ್ನೇರಿದ್ದು, ಈ ಅಪವಾದ-ಆರೋಪಗಳು ಕಾಂತಾರ-2 ನ್ನೂ ಬಿಡುವಂತೆ ಕಾಣುತ್ತಿಲ್ಲ.