ಉಡುಪಿ, ಜೂನ್ 10: ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ ವತಿಯಿಂದ ಜೂನ್ 8 ರಂದು ಮುಳ್ಳೂರು ತನಿಖಾ ಠಾಣೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
ರಾಷ್ಟ್ರೀಯ ಉದ್ಯಾನವನದಲ್ಲಿ ಹಾದು ಹೋಗಿರುವ ರಸ್ತೆಯಲ್ಲಿ ಪ್ರಯಾಣಿಸುವ ಪ್ರವಾಸಿಗರು ಎಸೆಯುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಪರಿಸರ ಸ್ನೇಹಿ ಕಸ ಸಂಗ್ರಹಣಾ ಚೀಲದಲ್ಲಿ ಸಂಗ್ರಹಿಸಿ, ಮುಂದಿನ ತನಿಖಾ ಠಾಣೆಯಲ್ಲಿ ಇಲಾಖಾ ಸಿಬ್ಬಂದಿಗಳಿಗೆ ನೀಡುವ ಬಗ್ಗೆ ಪರಿಸರ ಸ್ನೇಹಿ ಕಸ ಸಂಗ್ರಹಣಾ ಚೀಲವನ್ನು ಕಾರ್ಕಳ ಶಾಸಕ ಸುನೀಲ್ ಕುಮಾರ್ ಉದ್ಘಾಟಿಸಿ, ಹೆದ್ದಾರಿಯಲ್ಲಿ ತೆರಳುವ ವಾಹನಗಳಿಗೆ ಸಾಂಕೇತಿಕವಾಗಿ ವಿತರಿಸಿದರು. ಕಾರ್ಯಕ್ರಮದಲ್ಲಿ ಪರಿಸರ ಸ್ನೇಹಿ ಕಸ ಸಂಗ್ರಹಣಾ ಚೀಲದ ಉಪಯೋಗದ ಕುರಿತು ಸಾಕ್ಷಚಿತ್ರವನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರನ್, ವನ್ಯಜೀವಿ ಪರಿಪಾಲಕ ರವಿರಾಜ್ ನಾರಾಯಣ್, ಮಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ಕುಮಾರ್ ಹೆಗ್ಡೆ, ಮತ್ತಿತರರು ಉಪಸ್ಥಿತರಿದ್ದರು.
ಕುದುರೆಮುಖ ವನ್ಯಜೀವಿ ಉಪ ವಿಭಾಗ ಕಾರ್ಕಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ತಾಂತ್ರಿಕ ಸಹಾಯಕ ಭಗವಾನ್ ದಾಸ್ ಕುಡ್ತಲ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಕಳ ವನ್ಯಜೀವಿ ವಲಯದ ವಲಯ ಅರಣ್ಯ ಅಧಿಕಾರಿ ಸಂತೋಷ್ ಸಾಗರ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.