ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಸಮಾಪ್ತ

ಲಾಲ್ ಚೌಕ್: ಶ್ರೀನಗರದ ಐತಿಹಾಸಿಕ ನಗರ ಕೇಂದ್ರವಾದ ಲಾಲ್ ಚೌಕ್‌ನಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾನುವಾರ (ಜನವರಿ 29) ಭಾರತ್ ಜೋಡೋ ಯಾತ್ರೆಯನ್ನು ಮುಕ್ತಾಯಗೊಳಿಸಿದರು. ಭಾನುವಾರ ಬೆಳಗ್ಗೆ ರಾಹುಲ್ ಗಾಂಧಿ ಮತ್ತು ಇತರ ಹಿರಿಯ ನಾಯಕರ ಶ್ರೀನಗರ ನಗರದ ಹೊರವಲಯದ ಪಂಥಾ ಚೌಕ್‌ನ ರಾತ್ರಿ ವಾಸ್ತವ್ಯದ ಬಳಿಕ ಭಾರತ್ ಜೋಡೋ ಯಾತ್ರೆ ಪ್ರಾರಂಭವಾಯಿತು. ಇತರ ಸ್ಥಳೀಯ ಪಕ್ಷಗಳ ಅನೇಕ ರಾಜಕಾರಣಿಗಳು ಲಾಲ್ ಚೌಕ್‌ಗೆ ರಾಹುಲ್ ಗಾಂಧಿ ಜೊತೆ ಮೆರವಣಿಗೆ ನಡೆಸಿದರು.

“ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ, ಭಾರತಕ್ಕೆ ನೀಡಿದ ಭರವಸೆಯನ್ನು ಇಂದು ಈಡೇರಿಸಲಾಗಿದೆ. ದ್ವೇಷವು ಸೋಲುತ್ತದೆ, ಪ್ರೀತಿ ಯಾವಾಗಲೂ ಗೆಲ್ಲುತ್ತದೆ. ಭಾರತದಲ್ಲಿ ಭರವಸೆಗಳ ಹೊಸ ಉದಯವಾಗಲಿದೆ” ಎಂದು ಕಾರ್ಯಕ್ರಮದ ನಂತರ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 4,000 ಕಿಲೋಮೀಟರ್‌ಗಿಂತಲೂ ಹೆಚ್ಚು ಕ್ರಮಿಸಿ ಭಾರತ್ ಜೋಡೋ ಯಾತ್ರೆಯನ್ನು ರಾಹುಲ್ ಗಾಂಧಿ ಕೊನೆಗೊಳಿಸಿದ್ದಾರೆ.  ಕಳೆದ ವರ್ಷ ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಲ್ಲಿ ಆರಂಭಿಸಲಾದ ಯಾತ್ರೆಯು 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಚರಿಸಿದೆ.