ಕಾರ್ಕಳ: ಐದು ದಿನಗಳ ಕಾಲ ನಡೆದ ಸಂತ ಲಾರೆನ್ಸ್ ಮೈನರ್ ಬೆಸಿಲಿಕಾ ಅತ್ತೂರಿನ ವಾರ್ಷಿಕ ಹಬ್ಬವು ಜನವರಿ 26 ಗುರುವಾರದಂದು ಅದ್ಧೂರಿಯಾಗಿ ಸಂಪನ್ನಗೊಂಡಿತು.
ಬೆಂಗಳೂರಿನ ಆರ್ಚ್‌ಡಯಾಸಿಸ್‌ನ ಆರ್ಚ್‌ಬಿಷಪ್ ಡಾ.ಬರ್ನಾಡ್ ಮೊರಾಸ್ ಅವರು ಅಂತಿಮ ದಿನದ ಹಬ್ಬದ ಆಚರಣೆಗಳ ನೇತೃತ್ವ ವಹಿಸಿದ್ದರು.
ಸತ್ಯ ಮತ್ತು ಪ್ರಾಮಾಣಿಕತೆ ಶಾಶ್ವತ ಸದ್ಗುಣಗಳು. ಇವುಗಳಿಂದ ನವ ಸಮಾಜ ನಿರ್ಮಾಣ ಸಾಧ್ಯ. ಕೌಟುಂಬಿಕ ಜೀವನದಲ್ಲೂ ನಮಗೆ ಇದು ಬೇಕು. ನಾವು ಶಾಂತಿ ಮತ್ತು ಪ್ರೀತಿಯಿಂದ ಬದುಕಿದಾಗ, ನಾವು ದೇವರನ್ನು ಸಾಕ್ಷಾತ್ಕರಿಸಬಹುದು ಎಂದು ಅವರು ಧರ್ಮಬೋಧನೆ ನೀಡಿದರು.
ಜನವರಿ 22 ರಂದು ಪ್ರಾರಂಭವಾದ ವಾರ್ಷಿಕ ಹಬ್ಬದ ಆಚರಣೆಗಳು ಐದು ದಿನಗಳವರೆಗೆ ಸಂಭ್ರಮದಿಂದ ನಡೆಯಿತು ಮತ್ತು ಲಕ್ಷಾಂತರ ಭಕ್ತರು ಚರ್ಚಿಗೆ ಭೇಟಿ ನೀಡಿದರು. ಹಬ್ಬದ ಅಂತಿಮ ದಿನದಂದು ಭಕ್ತರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಐದು ದಿನಗಳ ಕಾಲ ಒಟ್ಟು 35 ಬಲಿಪೂಜೆ ಕಾರ್ಯಕ್ರಮಗಳು ನಡೆದವು.
ವಾರ್ಷಿಕ ಹಬ್ಬವು ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಡಾ ಜೆರಾಲ್ಡ್ ಐಸಾಕ್ ಲೋಬೋ ಅವರ ಮಾರ್ಗದರ್ಶನದಲ್ಲಿ ಮತ್ತು ಸೇಂಟ್ ಲಾರೆನ್ಸ್ ಮೈನರ್ ಬೆಸಿಲಿಕಾ ರೆಕ್ಟರ್ ಫಾದರ್ ಅಲ್ಬನ್ ಡಿಸೋಜ ಅವರ ನೇತೃತ್ವದಲ್ಲಿ ನಡೆಯಿತು. ಕಾರ್ಕಳ ನಗರ ಮತ್ತು ಗ್ರಾಮಾಂತರ ಪೊಲೀಸರು, ಸ್ವಯಂಸೇವಕರು ಹಾಗೂ ಅತ್ತೂರು ಬಸಿಲಿಕಾ ಆಡಳಿತ ಸಮಿತಿ ಸದಸ್ಯರು ಎಲ್ಲಾ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ನಡೆಸಲು ಸಹಕಾರ ನೀಡಿದರು.