ಉಡುಪಿ: ಅಂಗವಾಡಿ ಕಾರ್ಯಕರ್ತೆಯರ ಪ್ರತಿಭಟನೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ಕಣ್ಣಿದ್ದು ಕುರುಡಾಗಿರುವ ಬಸವರಾಜ ಬೊಮ್ಮಾಯಿ ಅವರು ಮಹಿಳೆಯರಿಗೆ ನೀಡುವ ಗೌರವ ಏನು ಎನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂಬಂತಿದೆ ಎಂದು ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೆಲಿಯೊ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಕುಳಿತು ಚಳಿಯನ್ನೂ ಲೆಕ್ಕಿಸದೆ ಅಹೋರಾತ್ರಿ ಧರಣಿ ನಡೆಸುತ್ತಿದ್ದು ಅವರ ಬೇಡಿಕೆಗಳನ್ನು ಪರಿಗಣಿಸುವ ಕನಿಷ್ಠ ಪ್ರಯತ್ನ ಕೂಡ ಸರಕಾರ ಮಾಡದಿರುವುದು ಖೇದಕರ ಸಂಗತಿಯಾಗಿದೆ. ರಾಜ್ಯದ ಮಕ್ಕಳ ಬೆಳವಣಿಗೆಗೆ ಮಾತ್ರವಲ್ಲದೆ ಎಲ್ಲಾ ರೀತಿಯ ಕೆಲಸಗಳನ್ನು ಮಾಡಿಕೊಂಡು ಬಂದಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಇಂದು ಕನಿಷ್ಠ ವೇತನ ಕೂಡ ಪಡೆಯದೆ ಬೆಳಗ್ಗಿನಿಂದ ಸಂಜೆಯ ತನಕ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಕೇವಲ ಮಹಿಳಾ ಮತ್ತು ಮಕ್ಕಳ ಆರೈಕೆಯ ಕೆಲಸಕ್ಕೆಂದು ನೇಮಿಸಿಕೊಂಡು ಅರ್ಧ ದಿನದ ಕೆಲಸ ಮಾಡಿಕೊಂಡು ಬರುತ್ತಿದ್ದ ಅವರು ಇಂದು ದಿನವಿಡೀ ಅಂಗನವಾಡಿಯಲ್ಲಿ ಇಲಾಖೆಯ ಮೇಲಾಧಿಕಾರಿಗಳು ನೀಡುವ ಪ್ರತಿಯೊಂದು ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ. ಪುಟ್ಟ ಮಕ್ಕಳ ಆರೈಕೆ, ಬಾಣಂತಿಯರ ಪೌಷ್ಟಿಕಾಂಶದ ಕಾಳಜಿ ವಹಿಸುವ ಜವಾಬ್ದಾರಿಯೊಂದಿಗೆ ಮತದಾರರ ಪಟ್ಟಿ ಪರಿಷ್ಕರಣೆ, ಮಗುವಿನ ಜನನ ಮರಣದ ಜವಾಬ್ದಾರಿ ಸೇರಿದಂತೆ ಹಲವಾರು ಜವಾಬ್ದಾರಿಗಳನ್ನು ಅವರು ನಿಭಾಯಿಸುತ್ತಿದ್ದಾರೆ.
ಕೋವಿಡ್ ಸಮಯದಲ್ಲಿ ಎಲ್ಲರೂ ಮನೆಯಲ್ಲಿದ್ದರೆ ಅಂಗನಾಡಿ ಹಾಗೂ ಆಶಾ ಕಾರ್ಯಕರ್ತೆಯರು ತಮ್ಮ ಇಲಾಖೆಯ ಕಾರ್ಯದಲ್ಲಿ ರಾತ್ರಿ ಹಗಲು ಎನ್ನದೆ ತೊಡಗಿಕೊಂಡಿದ್ದರು. ಮಕ್ಕಳಿಗೆ ಹಾಗೂ ತಾಯಂದಿರಿಗೆ ಪೌಷ್ಟಿಕಾಂಶದ ಮೊಟ್ಟೆ ನೀಡುತ್ತಿದ್ದು, ಕಡಿಮೆ ಬಿದ್ದ ಹಣವನ್ನು ಸರಕಾರ ಭರಿಸದಿದ್ದಲ್ಲಿ ಕೆಲವೊಮ್ಮೆ ಅಂಗನವಾಡಿ ಕಾರ್ಯಕರ್ತೆಯುರು ತಮ್ಮ ಕೈಯಿಂದ ಭರಿಸಬೇಕಾದ ಅನೀವಾರ್ಯತೆ ಇದೆ. ಈ ಹುದ್ದೆಗೆ ಬರುವ ಯಾರೂ ಕೂಡ ಶ್ರೀಮಂತ ಕುಟುಂಬದಿಂದ ಬಂದವರಾಗಿರುವುದಿಲ್ಲ ಬದಲಾಗಿ ಬಡ ಕುಟುಂಬದ ಮಹಿಳೆಯರು ಹೊಟ್ಟೆಪಾಡಿಗಾಗಿ ಇಂತಹ ಕರ್ತವ್ಯಕ್ಕೆ ಬಂದಾಗ ಸರಕಾರ ಅವರಿಗೆ ಸೂಕ್ತ ವೇತನ ನೀಡದೆ ಸತಾಯಿಸುವುದು ಶೋಭೆ ತರುವುದಿಲ್ಲ. ಒಂದು ಕಡೆ ಕಾರ್ಯಕರ್ತೆಯರ ಕೆಲಸಕ್ಕೆ ಸಮಾನವಾದ ಸೂಕ್ತ ವೇತನ ಲಭಿಸದೆ ಇದ್ದು, ಇನ್ನೊಂದೆಡೆ ಇಲಾಖೆಯ ಅಧಿಕಾರಗಳ ಒತ್ತಡದ ನಡುವೆ ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿಯಲ್ಲಿ ಅವರು ನ್ಯಾಯಯುತ ಬೇಡಿಕೆಗಳನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವಾಗ ಅವರನ್ನು ಕಡೆಗಣಿಸುತ್ತಿರುವ ಸರಕಾರದ ವರ್ತನೆ ಖಂಡನೀಯ. ಕೂಡಲೇ ಸರಕಾರ ಅಂಗನಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ನೀಡಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.