ಜ.22 ರಂದು ಜಯಕರ ಶೆಟ್ಟಿ ಇಂದ್ರಾಳಿ ಅವರಿಗೆ ಅಭಿನಂದನಾ ಸಮಾರಂಭ; ಸೇವಾ ಚಿಂತನಾ ಕಾರ್ಯಕ್ರಮ

ಉಡುಪಿ: ಬಡಗಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಉಡುಪಿ ಇದರ ಆಶ್ರಯದಲ್ಲಿ ಸಹಕಾರ ರತ್ನ‌ ಪ್ರಶಸ್ತಿ ಪುರಸ್ಕೃತರಾದ ಜಯಕರ ಶೆಟ್ಟಿ ಇಂದ್ರಾಳಿ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ಸೇವಾ ಚಿಂತನಾ ಕಾರ್ಯಕ್ರಮವನ್ನು ಜ.22ರಂದು ಉಡುಪಿಯ ಬಾಸೆಲ್ ಮಿಷನರೀಸ್ ಅಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಸಂಜೀವ ಕಾಂಚನ್‌ ಹೇಳಿದರು.

ನಗರದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 8.30ಕ್ಕೆ ಸರಿಯಾಗಿ ಉಡುಪಿಯ ಜೋಡುಕಟ್ಟೆಯಿಂದ ಮಿಷನ್ ಆಸ್ಪತ್ರೆಯ ಮಾರ್ಗವಾಗಿ ಬಾಸೆಲ್ ಮಿಷನರೀಸ್ ಅಡಿಟೋರಿಯಂವರೆಗೆ ಭವ್ಯ ಮೆರವಣಿಗೆ ನಡೆಯಲಿದ್ದು, ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ ದೇವೇಗೌಡ ಅವರು ಚಾಲನೆ ನೀಡಲಿದ್ದಾರೆ ಎಂದರು.

ಬೆಳಿಗ್ಗೆ 10 ಗಂಟೆಗೆ ಅದಮಾರು ಮಠದ ಈಶಪ್ರಿಯತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್‌ ಸಭಾಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ, ಶಾಸಕರಾದ ಕೆ. ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್ ಮೊದಲಾದವರು ಮುಖ್ಯ‌ ಅತಿಥಿಗಳಾಗಿ‌ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಯಶ್‌ಪಾಲ್ ಸುವರ್ಣ ಅವರನ್ನು ಸನ್ಮಾನಿಸಲಾಗುವುದು ಹಾಗೂ ಜಯಕರ ಶೆಟ್ಟಿ ಇಂದ್ರಾಳಿಯವರ ಅಭಿನಂದನಾ ಗ್ರಂಥ ಜಯಪಥ ಬಿಡುಗಡೆ ಮಾಡಲಾಗುವುದು ಎಂದು‌ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸೊಸೈಟಿ ಉಪಾಧ್ಯಕ್ಷ ಎಲ್. ಉಮಾನಾಥ್, ಅಭಿನಂದನಾ ಸಮಿತಿ ಸಂಚಾಲಕ ಪುರುಷೋತ್ತಮ ಪಿ. ಶೆಟ್ಟಿ, ಪ್ರಭಾರ ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ, ಶೇರಿಗಾರ್, ಶಾಖಾ ಮುಖ್ಯಸ್ಥ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.