ಪಾಕ್ ಆಕ್ರಮಿತ ಕಾಶ್ಮೀರದ ನಿವಾಸಿಗಳು ಭಾರತೀಯ ಒಕ್ಕೂಟಕ್ಕೆ ಸೇರಲು ಸಿದ್ಧ: ಪಿಒಕೆ ಕಾರ್ಯಕರ್ತ ಅಮ್ಜದ್ ಅಯೂಬ್ ಮಿರ್ಜಾ

ಕರಾಚಿ: 1970 ರ ದಶಕದಲ್ಲಿ ಜುಲ್ಫಿಕರ್ ಅಲಿ ಭುಟ್ಟೊ ಪಾಕಿಸ್ತಾನಿಗಳು ಹುಲ್ಲು ತಿನ್ನುತ್ತಾರೆ, ಹಸಿವಿನಿಂದ ಇರುತ್ತಾರೆ ಆದರೆ ಪರಮಾಣು ಬಾಂಬ್ ಹೊಂದಿಯೇ ಹೊಂದುತ್ತಾರೆ ಎಂದಿದ್ದರು. ಅದರಂತೆ ಈಗ 2023 ರಲ್ಲಿ ಪಾಕಿಸ್ತಾನಿಗಳು ತಮ್ಮದೇ ಆದ ಪರಮಾಣು ಬಾಂಬ್ ಹೊಂದಿದ್ದಾರೆ ಆದರೆ ಅಲಿ ಭುಟ್ಟೋ ಹೇಳಿದಂತೆ ಹುಲ್ಲು ತಿನ್ನುತ್ತಿದ್ದಾರೆ, ಇಡೀ ಪ್ರಪಂಚವನ್ನು ಹಣಕ್ಕಾಗಿ ಬೇಡುತ್ತಿದ್ದಾರೆ, ಜೀವ ಉಳಿಸುವ ಔಷಧಿಗಳಿಗಾಗಿ ಭಾರತವನ್ನು ಅವಲಂಬಿಸಿದ್ದಾರೆ.

ಪಾಕಿಸ್ತಾನವು ಭಯೋತ್ಪಾದನೆಯನ್ನು ಪೋಷಿಸುತ್ತ ಬಂದಿದ್ದು ಇದೀಗ ಅದರ ಬೆಲೆ ತೆರುತ್ತಿದೆ. ಪಾಕಿಸ್ತಾನವು ಕಂಗಾಲಾಗಿ ಹೋಗಿದೆ. ಅಲ್ಲಿನ ಜನರಿಗೆ ತಿನ್ನಲು ಆಹಾರವೂ ಇಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಶೆಹಬಾಜ್ ಷರೀಫ್ ಸರ್ಕಾರದ ವಿರುದ್ಧ ಸಾರ್ವಜನಿಕರಲ್ಲಿ ಕೋಪ ಬೆಳೆಯುತ್ತಲೇ ಇದ್ದು, ತಾವು ಭಾರತೀಯ ಒಕ್ಕೂಟಕ್ಕೆ ಸೇರಲು ಸಿದ್ದ ಎನ್ನುತ್ತಿದ್ದಾರೆ ಎಂದು ಪಿಒಕೆ ಕಾರ್ಯಕರ್ತ ಅಮ್ಜದ್ ಅಯೂಬ್ ಮಿರ್ಜಾ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎ.ಎನ್.ಐ ವರದಿ ಮಾಡಿದೆ.

ಕಡಿಮೆಯಾಗುತ್ತಿರುವ ವಿದೇಶಿ ವಿನಿಮಯ ಮೀಸಲು ಮತ್ತು ಭಾರೀ ಸಾಲದಿಂದಾಗಿ ಪಾಕಿಸ್ತಾನ ಸರ್ಕಾರವು ಮೂಲಭೂತ ಅವಶ್ಯಕತೆಗಳ ಮೇಲೆ ತೆರಿಗೆಗಳನ್ನು ಹೆಚ್ಚಿಸಿದೆ. ಇದು ಪಿಒಕೆ ಮತ್ತು ಅಕ್ರಮವಾಗಿ ಹಿಡಿದಿರುವ ಗಿಲ್ಗಿಟ್-ಬಾಲ್ಟಿಸ್ತಾನ್ ಎರಡರಲ್ಲೂ ಬೃಹತ್ ಸರ್ಕಾರಿ ವಿರೋಧಿ ಪ್ರತಿಭಟನೆಗಳನ್ನು ನಡೆಸಲು ಪಾಕಿಸ್ತಾನಿಗಳನ್ನು ಪ್ರಚೋದಿಸಿದೆ.

ಊಟವಿಲ್ಲ, ಹಿಟ್ಟಿಲ್ಲ ಎಂದು ಜನ ಬೀದಿಗಿಳಿದಿದ್ದು, ಪಿಒಜೆಕೆಯಲ್ಲಿ ಒಂದೇ ದಿನದಲ್ಲಿ 1200 ರೂ.ಗಳಷ್ಟು ಗೋಧಿ ಬೆಲೆ ಏರಿಕೆ ಮಾಡಿದ್ದಾರೆ. ಜನರು ಬೇಸರಗೊಂಡಿದ್ದಾರೆ. ಹಿಟ್ಟಿನ ಸರ್ಕಾರಿ ಡಿಪೋಗಳಿಗೆ ಬೀಗ ಹಾಕಲಾಗಿದೆ. ಅಲ್ಲಿ ಹಿಟ್ಟು ಇಲ್ಲ. ಪಿಒಕೆಯ ಪ್ರತಿಯೊಂದು ನಗರದಲ್ಲಿ ಜನರು ಪ್ರತಿಭಟಿಸುತ್ತಿದ್ದಾರೆ, ವಿದ್ಯಾರ್ಥಿಗಳು, ವಕೀಲರು, ನಾಗರಿಕ ಸಮಾಜ ಮತ್ತು ಮಹಿಳೆಯರು ಸಹ ಪ್ರತಿಭಟಿಸುತ್ತಿದ್ದಾರೆ ಎಂದು ಮಿರ್ಜಾ ಹೇಳಿದ್ದಾರೆ.

ಪಾಕ್ ಯುವಕರು ಈಗ ‘ಟೂಟೆ ರಿಶ್ತೆ ಜೋಡ್ ದೋ’ (ಮುರಿದುಹೋದ ಸಂಬಂಧಗಳನ್ನು ಮರುನಿರ್ಮಿಸಿ) ಎಂದು ಆಗ್ರಹಿಸುವ ಘೋಷಣೆಗಳನ್ನು ಕೂಗುತ್ತಿದ್ದು, ದಿವಾಳಿ ಎದ್ದಿರುವ ಪಾಕ್ ನಲ್ಲಿರಲು ಬಯಸದೆ ಲಡಾಖ್ ಮತ್ತು ಜಮ್ಮುಮತ್ತು ಕಾಶ್ಮೀರಕ್ಕೆ ಸೇರಲು ಸಿದ್ಧರಿದ್ದಾರೆ ಎಂದು ಮಿರ್ಜಾ ಹೇಳಿರುವುದಾಗಿ ವರದಿಯಾಗಿದೆ.