ಉಡುಪಿ: ಇಲ್ಲಿನ ಬ್ರಹ್ಮಗಿರಿಯಲ್ಲಿ 11 ವರ್ಷದ ಬಾಲಕಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಜ.14 ರಂದು ನಡೆದಿದೆ. ಮೃತ ಬಾಲಕಿಯನ್ನು ಪ್ರವೀಣ್ ಶೆಟ್ಟಿ ಎಂಬವರ ಪುತ್ರಿ ಮಂಗಳಾದೇವಿ (11) ಎಂದು ಗುರುತಿಸಲಾಗಿದೆ. ಬಾಲಕಿಯು ಕುಂಜಾರುಗಿರಿಯ ಖಾಸಗಿ ಶಾಲೆಯಲ್ಲಿ ಆರನೇ ತರಗತಿ ಓದುತ್ತಿದ್ದಳು.
ಪೊಲೀಸರ ಪ್ರಕಾರ, ಶನಿವಾರದಂದು ಸಂಕ್ರಾತಿ ಪ್ರಯುಕ್ತ ಶಾಲೆಗೆ ರಜೆ ಸಾರಲಾಗಿದ್ದರಿಂದ ಬಾಲಕಿ ಮನೆಯಲ್ಲಿಯೇ ಇದ್ದಳು. ಆಕೆಯ ಪೋಷಕರು ಕೆಲಸಕ್ಕೆ ಹೋಗುವುದರಿಂದ ಆಕೆ ಮನೆಯಲ್ಲಿ ಒಬ್ಬಳೇ ಇದ್ದಳು. ಪೋಷಕರು ಸಂಜೆ ಮನೆಗೆ ಹಿಂದಿರುಗಿ ನೋಡಿದಾಗ ಬಾಲಕಿ ಮಲಗುವ ಕೋಣೆಯ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ನಂತರ ಬಾಗಿಲು ಒಡೆದು ಮಲಗುವ ಕೋಣೆಗೆ ಪ್ರವೇಶಿಸಿ ನೋಡಿದಾಗ ಬಾಲಕಿಯು ಬಚ್ಚಲುಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಇದರಿಂದ ಹೆತ್ತವರು ಆಘಾತಕ್ಕೊಳಗಾಗಿದ್ದಾರೆ.
ಬಾಲಕಿ ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳಲು ನಿಖರವಾದ ಕಾರಣವೇನೆಂದು ತಿಳಿದುಬಂದಿಲ್ಲ. ಆದಾಗ್ಯೂ, ಬಾಲಕಿಯು ಯೂಟ್ಯೂಬ್ ನಲ್ಲಿ ಯಾವುದಾದರೂ ವೀಡಿಯೋ ನೋಡಿಕೊಂಡು ಈ ರೀತಿ ಪ್ರಯೋಗಕ್ಕೆ ಮುಂದಾಗಿರಬಹುದೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಮಲಗುವ ಕೋಣೆಯಲ್ಲಿ ಬಾಲಕಿ ಬಳಸುತ್ತಿದ್ದ ಟ್ಯಾಬ್ ಪೊಲೀಸರಿಗೆ ಸಿಕ್ಕಿದೆ.
ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.