ಶಬರಿಮಲೆ: ಅಯ್ಯಪ್ಪ ವೃತಧಾರಿಗಳು ಜೀವನದಲ್ಲಿ ಒಂದು ಬಾರಿಯಾದರೂ ದರ್ಶನ ಪಡೆಯಬೇಕೆಂದು ಹಂಬಲಿಸುವ ಮಕರ ಜ್ಯೋತಿ ದರ್ಶನವು ಪ್ರತಿವರ್ಷವೂ ಜನವರಿ 14 ಅಥವಾ 15 ರಂದು ವೀಕ್ಷಿಸಬಹುದಾಗಿದ್ದು, ಇದು ಶಬರಿಮಲೆಯಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಪೊನ್ನಂಬಲೆಮೇಡುವಿನಿಂದ ಸಂಜೆ 6:00 ರಿಂದ 8:00 ರ ಮಧ್ಯದಲ್ಲಿ ಕಾಣಲು ಸಿಗುತ್ತದೆ.
ಮಕರವಿಳಕ್ಕು ಉತ್ಸವವನ್ನು ಶಬರಿಮಲೆ ದೇವಸ್ಥಾನದಿಂದ ಜನವರಿ 14 ರಂದು ಸಂಜೆ 5:00 ಗಂಟೆಯಿಂದ ನೇರ ಪ್ರಸಾರ ಮಾಡಲಾಗುವುದು ಎಂದು ದೂರದರ್ಶನ ಅಧಿಕೃತ ಟ್ವಿಟರ್ ಖಾತೆ ಪ್ರಕಟಿಸಿದೆ.
Watch Makaravilakku Festival from the famous Sabarimala Temple, this evening from 5 pm on https://t.co/OFUmYgY4Ws pic.twitter.com/3PD2oW2qz5
— Doordarshan National दूरदर्शन नेशनल (@DDNational) January 14, 2023
ಅಯ್ಯಪ್ಪ ದೇವರ ಮೂರ್ತಿಯನ್ನು ಅಲಂಕರಿಸಿದ ನಂತರ ಮಕರವಿಳಕ್ಕು ಕಾರ್ಯಕ್ರಮ ನಡೆಯಲಿದೆ. ಭಗವಂತನ ಪವಿತ್ರ ಆಭರಣಗಳು, ಅಥವಾ ತಿರುವಾಭರಣಂ (ಪಂದಳಂ ರಾಜನಿಂದ ನೀಡಲ್ಪಟ್ಟಿದೆ), ಮೂರು ಪೆಟ್ಟಿಗೆಗಳಲ್ಲಿ ಶಬರಿಮಲೆಗೆ ಬರುತ್ತವೆ. ಆಭರಣದ ಪೆಟ್ಟಿಗೆಗಳ ಆಗಮನದ ನಂತರ, ಇಡೀ ಪರಿಸರವು ಲಕ್ಷಾಂತರ ಭಕ್ತರ “ಶರಣಂ ಅಯ್ಯಪ್ಪ” ಉದ್ಘೋಷದೊಂದಿಗೆ ಪ್ರತಿಧ್ವನಿಸುತ್ತದೆ.
ಮಕರ ಜ್ಯೋತಿಯು ಶಬರಿಮಲೆ ದೇವಸ್ಥಾನದಲ್ಲಿ ಆಚರಿಸಲಾಗುವ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದಾದ ಮಕರವಿಳಕ್ಕು ಉತ್ಸವದ ಒಂದು ಭಾಗವಾಗಿದೆ. ಈ ವರ್ಷ, ಮಕರ ರಾಶಿಗೆ ಸೂರ್ಯನು ಪ್ರವೇಶಿಸುವ ದಿನವಾದ ಜನವರಿ 15 ರಂದು ರಜಾದಿನವನ್ನಾಗಿ ಘೋಷಿಸಲಾಗಿದೆ. ಅಯ್ಯಪ್ಪನು ತನ್ನ ಭಕ್ತರನ್ನು ಆಶೀರ್ವದಿಸಲು ಮಕರ ಜ್ಯೋತಿಯಾಗಿ ಕಾಣಿಸಿಕೊಳ್ಳುತ್ತಾನೆ ಎಂದು ಬಲವಾಗಿ ನಂಬಲಾಗಿದೆ.