ಬಿಎಂಡಬ್ಲ್ಯೂ ಅನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಟೆಸ್ಲಾ: 25 ವರ್ಷಗಳಲ್ಲಿ ಮೊದಲ ಬಾರಿಗೆ ಅಮೇರಿಕಾ ಕಾರು ಕಂಪನಿಯ ಸಾಧನೆ

25 ವರ್ಷಗಳಲ್ಲಿ ಅಮೇರಿಕಾದ ವಾಹನ ತಯಾರಕರು ಮಾಡಲಾಗದ್ದನ್ನು ಟೆಸ್ಲಾ ಮಾಡಿ ತೋರಿಸಿದೆ. 2022 ರಲ್ಲಿ ಯುಎಸ್‌ನ ಅಗ್ರ ಐಷಾರಾಮಿ ಬ್ರಾಂಡ್‌ ಕಾರ್ ನ ಶೀರ್ಷಿಕೆಯನ್ನು ಪಡೆದ ಟೆಸ್ಲಾ, ಇದುವರೆಗೂ ಅಗ್ರಸ್ಥಾನದಲ್ಲಿದ್ದ ಜರ್ಮನಿಯ ಬಿಎಂಡಬ್ಲ್ಯೂ ಕಾರುಗಳನ್ನು ಹಿಂದಿಕ್ಕಿದೆ.

2021 ರಲ್ಲಿ ಟೆಸ್ಲಾ ಅಮೇರಿಕಾದಲ್ಲಿ ಬಿಎಂಡಬ್ಲ್ಯೂ ಗಿಂತ ಕೇವಲ 23,244 ಕಡಿಮೆ ವಾಹನಗಳನ್ನು ಮಾರಾಟ ಮಾಡಿತ್ತು, ಆದರೆ 2022 ರಲ್ಲಿ ಟೆಸ್ಲಾ ಇದನ್ನು ಸಂಪೂರ್ಣವಾಗಿ ತಿರುಗಿಸಿತು. ಆಟೋಮೋಟಿವ್ ನ್ಯೂಸ್ ರಿಸರ್ಚ್ ಮತ್ತು ಡಾಟಾ ಸೆಂಟರ್‌ನ ಅಂದಾಜಿನ ಪ್ರಕಾರ ಟೆಸ್ಲಾ ಕಳೆದ ವರ್ಷ 491,000 ಕಾರುಗಳನ್ನು ಮಾರಾಟ ಮಾಡಿದೆ. ಇದು ಅವರು 2021 ರಲ್ಲಿ ಮಾರಾಟ ಮಾಡಿದ್ದಕ್ಕಿಂತ 56% ಕ್ಕಿಂತ ಹೆಚ್ಚಾಗಿದೆ ಮತ್ತು ಅದೇ ಸಮಯದಲ್ಲಿ ಬಿಎಂಡಬ್ಲ್ಯೂ 332,388 ಕಾರುಗಳನ್ನು ಮಾರಾಟ ಮಾಡಿದೆ. ಬಿಎಂಡಬ್ಲ್ಯೂಗಿಂತಲೂ ಒಟ್ಟು 158,612 ಹೆಚ್ಚು ಕಾರುಗಳನ್ನು ಟೆಸ್ಲಾ ಮಾರಾಟ ಮಾಡಿದೆ.

ಟೆಸ್ಲಾ ತಮ್ಮ ಮಾರಾಟವನ್ನು 56% ಹೆಚ್ಚಿಸಿದರೆ, ಐಷಾರಾಮಿ ಕಾರು ವಿಭಾಗದಲ್ಲಿ ಒಟ್ಟಾರೆ ಮಾರಾಟವು 8% ರಷ್ಟು ಕುಸಿತವಾಗಿದೆ.

ಅಂಕಿಅಂಶಗಳ ಪ್ರಕಾರ 286,764 ಕಾರು ಮಾರಾಟದೊಂದಿಗೆ ಮರ್ಸಿಡಿಸ್-ಬೆನ್ಜ್‌ ಮೂರನೇ ಸ್ಥಾನಕ್ಕೆ ಕುಸಿದಿದೆ. ಲೆಕ್ಸಸ್ (258,704), ಆಡಿ (186,875), ಕ್ಯಾಡಿಲಾಕ್ (134,726), ಅಕ್ಯುರಾ (102,306), ಮತ್ತು ವೋಲ್ವೋ (102,038) ನಂತರದ ಸ್ಥಾನಗಳಲ್ಲಿವೆ.

ಎಕ್ಸ್‌ಪೀರಿಯನ್‌ ನೋಂದಣಿ ಮಾಹಿತಿಯ ಪ್ರಕಾರ ಟೆಸ್ಲಾ ಈಗ ಅಮೇರಿಕಾದ ಇವಿ ಮಾರುಕಟ್ಟೆಯಲ್ಲಿ ಮೂರನೇ ಎರಡರಷ್ಟು ಪಾಲನ್ನು ಪಡೆದುಕೊಳ್ಳಲು ಸಮರ್ಥವಾಗಿದೆ. ಟೆಸ್ಲಾ ಅವರ ಮಾರುಕಟ್ಟೆ ಪಾಲು ಇಡೀ ಇವಿ ಉದ್ಯಮದ ಉಳಿದ ಭಾಗಗಳಿಗಿಂತ ಅತ್ಯಂತ ಹೆಚ್ಚಾಗಿದೆ. ಟೆಸ್ಲಾ ಅಗ್ರ ಐಷಾರಾಮಿ ಬ್ರಾಂಡ್ ಕಾರ್ ಆಗಿ ಕಿರೀಟವನ್ನು ತೊಟ್ಟುಕೊಂಡಿದ್ದು, ಇದನ್ನು ಸದ್ಯಕ್ಕಂತೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ.