ಮಂಗಳೂರು: ತುಳುವರೆಲ್ಲಾ ಕಾತುರದಿಂದ ಕಾಯುತ್ತಿರುವ ತುಳುನಾಡಿನ ಮೊದಲ ಹಾರರ್ ಚಿತ್ರ ಎನ್ನುವ ಹೆಗ್ಗಳಿಕೆ ಹೊಂದಿರುವ ಶಕಲಕ ಬೂಮ್ ಬೂಮ್ ಚಿತ್ರವು ಜ.20 ರಂದು ತುಳುನಾಡಿನಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಬಗ್ಗೆ ಮಂಗಳೂರಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಿರ್ಮಾಪಕ ನಿತ್ಯಾನಂದ್ ನಾಯಕ್ ಮಾಹಿತಿ ನೀಡಿ, ಚಿತ್ರವನ್ನು ಶ್ರೀಶ ಎಳ್ಳಾರೆ ನಿರ್ದೇಶಿಸಿದ್ದಾರೆ. ಉಮೇಶ್ ಪ್ರಭು ಮಾಣಿಬೆಟ್ಟು ಸಹನಿರ್ಮಾಪಕರಾಗಿರುವ ಈ ಚಿತ್ರಕ್ಕೆ ಡಾಲ್ವಿನ್ ಕೊಳಗಿರಿ ಸಂಗೀತ ನಿರ್ದೇಶನ ಮತ್ತು ಪ್ರಜ್ವಲ್ ಸುವರ್ಣ ಮತ್ತು ಅರುಣ್ ರೈ ಛಾಯಾಗ್ರಹಣವಿದೆ ಎಂದರು.
ಚಿತ್ರವು 150 ವರ್ಷಗಳ ಹಿಂದಿನ ಒಂದು ಹಳೇ ಮನೆಯಲ್ಲಿ ನಡೆಯುವ ಘಟನೆಗಳ ಸುತ್ತ ಕೆಂದ್ರೀಕರಿಸಿದೆ. ಜನರನ್ನು ಮೋಸ ಮಾಡುತ್ತಾ ಬದುಕುವವರು ಒಂದು ಪಾಳು ಬಿದ್ದ ಮನೆಯಲ್ಲಿ ಬಂಧಿಯಾಗಿ ಏನೆಲ್ಲಾ ಪಡಿಪಾಟಲು ಪಡುತ್ತಾರೆ ಎನ್ನುವುದು ಚಿತ್ರದಕಥೆ. ಚಿತ್ರದಲ್ಲಿ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೀಡಲಾಗಿದೆ. ಅಂಗದಾನದ ಮಹತ್ವವನ್ನು ಚಿತ್ರದ ಮೂಲಕ ಸಾರಲಾಗಿದೆ ಎಂದು ಅವರು ಹೇಳಿದರು.
ಯಥಾಪ್ರಕಾರ ತುಳುವರ ಮನರಂಜನೆಗೆ ಕೊರತೆಯಾಗದಂತೆ ನಗುವಿನ ಕಡಲಲ್ಲಿ ತೇಲಿಸಲು ಅರವಿಂದ ಬೋಳಾರ್, ಉಮೇಶ್ ಮಿಜಾರ್, ಪ್ರವೀಣ್ ಮರ್ಕಮೆ, ಮಿಮಿಕ್ರಿ ಶರಣ್ ಮುಂತಾದವರು ಇರಲಿದ್ದಾರೆ. ಈ ಬಾರಿ ಅರವಿಂದ್ ಬೋಳಾರ್ ಜೀನಿಯ ವಿಶಿಷ್ಟ ಪಾತ್ರದಲ್ಲಿ ತೆರೆ ಮೇಲೆ ಕಾಣಿಸ್ಕೊಳ್ಳಲಿದ್ದಾರೆ. ಮನೆಮಂದಿಯೆಲ್ಲಾ ಕುಳಿತು ನೋಡಬಹುದಾದ ಚಿತ್ರ ಇದಾಗಿದ್ದು, ಗಾಡ್ವಿನ್ ಸ್ಪಾರ್ಕಲ್ ನಾಯಕನಾಗಿ ಹಾಗೂ ಲಕ್ಷ್ಯಾ ಶೆಟ್ಟಿ ನಾಯಕಿಯಾಗಿ ಮಿಂಚಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಚಿತ್ರ ನಟ ಗಾಡ್ವಿನ್ ಸ್ಪಾರ್ಕಲ್, ಸುನಿಲ್ ಕಡ್ತಲ, ಲಂಚುಲಾಲ್, ಡಾಲ್ವಿನ್ ಕೊಳಲಗಿರಿ, ವಿಘ್ನೇಶ್ ಮುಂತಾದವರು ಇದ್ದರು.