ಚಿಕನ್‌ಸಾಲ್ ಪ್ರವೇಶ ಹಾದಿಗೆ ತಡೆಬೇಲಿ: ಸಾರ್ವಜನಿಕ ಸಭೆ

ಕುಂದಾಪುರ: ಅಪಘಾತ ತಡೆಗೆ ನಗರಕ್ಕೆ ಸಂಪರ್ಕ ಕಲ್ಪಿಸುವ ಚಿಕನ್‌ಸಾಲ್ ರಸ್ತೆ ಪ್ರವೇಶ ಹಾದಿ ಬಂದ್ ಮಾಡಿದ ಹಿನ್ನೆಲೆಯಲ್ಲಿ ಸಾವಜನಿಕರಿಂದ ತೀವ್ರ ವಿರೋಧ ಕೇಳಿಬಂದ ಹಿನ್ನೆಲೆಯಲ್ಲಿ ಗುರುವಾರ ಸಂಗಮ್ ಪರಿಸರದ ಸಾರ್ವಜನಿಕರೊಂದಿಗೆ ಸಭೆ ನಡೆಸಿ ಜನಾಭಿಪ್ರಾಯ ಸಂಗ್ರಹಿಸಲಾಯಿತು.

ಗುರುವಾರ ಸಂಜೆ ಇಲ್ಲಿನ ಶಶಿಧರ ಹೊಟೇಲ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಡಿವೈಎಸ್‌ಪಿ ಬಿ.ಪಿ ದಿನೇಶ್ ಕುಮಾರ್, ಚಿಕನ್‌ಸಾಲ್ ರಸ್ತೆ ಪ್ರವೇಶ ಹಾದಿಗೆ ತಡೆಬೇಲಿ ಹಾಕಿದ್ದರಿಂದ ವಾಹನ ಸವಾರರು, ಸಾರ್ವಜನರಿಗಾಗುತ್ತಿರುವ ಸಮಸ್ಯೆಗಳು ಗಮನಕ್ಕೆ ಬಂದಿವೆ. ಆನಗಳ್ಳಿಯಿಂದ ಕುಂದಾಪುರಕ್ಕೆ ಸಂಚರಿಸುವ ರಸ್ತೆಗೆ ಹಾಕಿರುವ ತಡೆಬೇಲಿಯನ್ನು ತೆರವುಗೊಳಿಸುವ ಬಗ್ಗೆ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಡಾ| ಮಧುಕೇಶ್ವರ್ ಅವರ ಬಳಿ ಚರ್ಚಿಸಿ, ಸೂಕ್ತವಾದ ಕ್ರಮಕೈಗೊಳ್ಳಲಾಗುವುದು ಎಂದರು.
ಜೂ. ೧೦ ರಂದು ಎಸಿಯವರನ್ನು ಭೇಟಿ ಮಾಡಿ ಸಾರ್ವಜನಿಕರಿಗಾಗುತ್ತಿರುವ ಸಮಸ್ಯೆಗಳ ಕುರಿತು ಮನವರಿಕೆ ಮಾಡಿಕೊಡಲಾಗುವುದು. ಆ ಬಳಿಕ ಅವರ ಸಮಕ್ಷಮದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ರಸ್ತೆಗೆ ತಡೆಬೇಲಿ ಹಾಕಿದ್ದರಿಂದ ವಾಹನ ಸವಾರರಿಗಾಗುವ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಸಭೆಯ ಗಮನ ಸೆಳೆದರು. ಕೇವಲ ಅಪಘಾತದ ನೆಪವೊಡ್ಡಿ ತಡೆಬೇಲಿ ಹಾಕಿರುವುದು ಸರಿಯಾದ ಕ್ರಮವಲ್ಲ. ಸಂಗಮ್ ಜಂಕ್ಷನ್‌ನಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹಂಪ್ಸ್ ನಿರ್ಮಿಸಿದರೆ ಅಪಘಾತವನ್ನು ತಡೆಯಬಹುದು ಎಂದು ಸಾರ್ವಜನಿಕರು ಸಲಹೆಗಳನ್ನು ನೀಡಿದರು. ಇದಕ್ಕೆ ಸಮ್ಮತಿಸಿದ ಡಿವೈಎಸ್‌ಪಿಯವರು, ಹೆದ್ದಾರಿಯಲ್ಲಿ ಹಂಪ್ ಹಾಕುವ ಕ್ರಮ ಇಲ್ಲದಿದ್ದರೂ, ತಾತ್ಕಲಿಕವಾಗಿ ಹಾಕಿ ಎಂದು ಐಆರ್‌ಬಿ ಅಧಿಕಾರಿಗಳಿಗೆ ಸೂಚಿಸಿದರು.

ಗುತ್ತಿಗೆ ಕಂಪೆನಿಗೆ ಡಿವೈಎಸ್‌ಪಿ ಎಚ್ಚರಿಕೆ:
ಹೆದ್ದಾರಿಯುದ್ದಕ್ಕೂ ಅನೇಕ ಕಡೆಗಳಲ್ಲಿ ಕಾಮಗಾರಿ ಅವ್ಯವಸ್ಥೆಯಿಂದಾಗಿ ಮಳೆಗಾಲದಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಲಿದೆ. ಇನ್ನೂ ಮಳೆಗಾಲದ ಪೂರ್ವ ತಯಾರಿ ಮಾಡಿಕೊಂಡಂತೆ ಕಾಣುತ್ತಿಲ್ಲ. ಅರೆಬರೆ ಕಾಮಗಾರಿಯಿಂದ ದ್ವಿಚಕ್ರ ವಾಹನ ಸವಾರರಂತೂ ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಾರೆ. ಅಸಮರ್ಪಕ ಕಾಮಗಾರಿಯಿಂದಾಗಿ ಹೆದ್ದಾರಿಯಲ್ಲಿ ಏನಾದರೂ ಅಪಘಾತ ಸಂಭವಿಸಿದರೆ ಅದಕ್ಕೆ ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರರನ್ನೇ ನೇರ ಹೊಣೆ ಮಾಡಲಾಗುವುದು ಎಂದು ಡಿವೈಎಸ್‌ಪಿ ದಿನೇಶ್ ಕುಮಾರ್ ಎಚ್ಚರಿಸಿದರು.

ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಚಿಕನ್‌ಸಾಲ್ ರಸ್ತೆಗೆ ಏಕಾಏಕಿ ತಡೆಬೇಲಿ ಹಾಕಿದ ದಿನದಿಂದಲೂ ಸಂಗಮ್ ಪರಿಸರದ ಜನರು ಹಾಗೂ ವಾಹನ ಸವಾರರು ತಡೆಬೇಲಿ ತೆಗೆಯುವಂತೆ ಡಿವೈಎಸ್ಪಿಯವರಲ್ಲಿ ಮನವಿ ಮಾಡುತ್ತಲೇ ಬಂದಿದ್ದರು. 

ಸಭೆಯಲ್ಲಿ ಸಂಚಾರಿ ಠಾಣಾ ಎಸ್‌ಐ ಸುಧಾ ಅಘನಾಶಿನಿ, ಸ್ಥಳೀಯರಾದ ದಿವಾಕರ ಕಡ್ಗಿಮನೆ, ಶ್ರೀಧರ್ ಶೇರಿಗಾರ್, ಸುನೀಲ್ ಶೆಟ್ಟಿ ಹೇರಿಕುದ್ರು ಮುಂತಾದವರು ಇದ್ದರು.