ಉಡುಪಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2023-24 ನೇ ಶೈಕ್ಷಣಿಕ ಸಾಲಿನಲ್ಲಿ ಕ್ರೀಡಾ ವಸತಿ ಶಾಲೆ ಹಾಗೂ ನಿಲಯಗಳ ಪ್ರವೇಶಾತಿಗೆ 7 ನೇ ತರಗತಿ ವ್ಯಾಸಾಂಗ ಮಾಡುತ್ತಿರುವ ಹಾಗೂ ಜೂನ್ 1 ರಿಂದ 8 ನೇ ತರಗತಿ ಪ್ರವೇಶಕ್ಕೆ ಅರ್ಹತೆ ಹೊಂದುವ 14 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ಆಯ್ಕೆ ಪ್ರಕ್ರಿಯೆಯು ಈ ಕೆಳಕಂಡ ಸ್ಥಳಗಳಲ್ಲಿ ನಡೆಯಲಿದೆ.
ಡಿಸೆಂಬರ್ 21 ರಂದು ಕುಂದಾಪುರ ಗಾಂಧಿ ಮೈದಾನ, ಡಿ. 22 ರಂದು ಬೈಂದೂರು ಸರಕಾರಿ ಜೂನಿಯರ್ ಕಾಲೇಜು ಎದುರಿನ ಗಾಂಧಿ ಮೈದಾನ, ಡಿ. 23 ರಂದು ಕಾರ್ಕಳ ಗಾಂಧಿ ಮೈದಾನ, ಡಿ. 26 ರಂದು ಹೆಜಮಾಡಿ ಕ್ರೀಡಾಂಗಣ, ಡಿ. 27 ರಂದು ಉಡುಪಿ ಜಿಲ್ಲಾ ಕ್ರೀಡಾಂಗಣ, ಡಿ. 28 ರಂದು ಬ್ರಹ್ಮಾವರ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನ ಹಾಗೂ ಡಿ. 29 ರಂದು ಜಿಲ್ಲಾ ಮಟ್ಟದ ಆಯ್ಕೆ ಪ್ರಕ್ರಿಯೆಯು ಉಡುಪಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ 10 ಗಂಟೆಯಿಂದ ನಡೆಯಲಿದೆ.
ಹಿರಿಯ ವಿಭಾಗದ ಕ್ರೀಡಾಪಟುಗಳ ಕ್ರೀಡಾವಸತಿ ನಿಲಯ ಪ್ರವೇಶಕ್ಕೆ ಜೂನ್ 1 ಕ್ಕೆ 18 ವರ್ಷ ವಯೋಮಿತಿ ಒಳಗಿರುವ, 2005 ಜೂನ್ 1 ರ ನಂತರ ಜನಿಸಿರುವ, ಪ್ರಥಮ ಪಿ.ಯು.ಸಿ ಸೇರಲು ಅರ್ಹರಾಗಿರುವ ಕೀಡಾಪಟುಗಳನ್ನು ನೇರವಾಗಿ ವಿಭಾಗಮಟ್ಟದಲ್ಲಿ ಆಯ್ಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ, ಅಜ್ಜರಕಾಡು, ಉಡುಪಿ ದೂ.ಸಂ.: 0820-2521324, ಅನಂತ್ರಾಮ್ ಮೊ.ನಂ: 9448984729 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.