ಉಡುಪಿ: ಇತ್ತೀಚಿನ ದಿನಗಳಲ್ಲಿ ಬಸ್ ಹತ್ತುವಾಗ ಮತ್ತು ಇಳಿಯುವಾಗ ಬಸ್ ಚಾಲಕ ಮತ್ತು ನಿರ್ವಾಹಕರ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯತನದ ವರ್ತನೆಯಿಂದಾಗಿ ಅನೇಕರು ಬಸ್ ನ ಚಕ್ರದಡಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿರುವ ನಿದರ್ಶನಗಳು ಹೆಚ್ಚುತ್ತಿವೆ. ಇಂತಹ ಅಪಘಾತಗಳಿಗೆ ನೇರವಾಗಿ ಕಾರಣವಾಗುವ ಬಸ್ ಚಾಲಕ ಹಾಗೂ ನಿರ್ವಾಹಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹಾಕೆ ಅಕ್ಷಯ್ ಮಚ್ಚೀಂದ್ರ ತಿಳಿಸಿದ್ದಾರೆ.
ಪ್ರಯಾಣಿಕ ಬಸ್ಗಳಲ್ಲಿ ಬಸ್ಸಿನ ಚಾಲಕ ಹಾಗೂ ನಿರ್ವಾಹಕರು ನಿರ್ಲಕ್ಷ್ಯದಿಂದ ಪ್ರಯಾಣಿಕರು ಇಳಿಯುವ ಮತ್ತು ಹತ್ತುವ ಮೊದಲೇ ಬಸ್ಸನ್ನು ಚಲಾಯಿಸುವುದು, ಅತಿಯಾದ ಪ್ರಯಾಣಿಕರನ್ನು ತುಂಬಿಸುವುದು, ಫುಟ್ಬೋರ್ಡ್ ಮೇಲೆ ನೇತಾಡಿಕೊಂಡು ಪ್ರಯಾಣಿಸುವಷ್ಟು ಪ್ರಯಾಣಿಕರನ್ನು ಸಾಗಿಸುತ್ತಿರುವುದು ಮುಂತಾದ ಘಟನೆಗಳು ಕಂಡುಬಂದಿದೆ. ಇವು ಅಪಘಾತ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿವೆ. ಈ ರೀತಿ ಅಪಘಾತಗಳಿಗೆ ಕಾರಣವಾಗುವ ಬಸ್ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಕಳ ಹಿರ್ಗಾನದಲ್ಲಿ ಬಸ್ ಹತ್ತಲು ಪ್ರಯತ್ನಿಸುತ್ತಿದ್ದ ಕೃಷ್ಣ ನಾಯ್ಕ್, ಮಂಗಳೂರಿನ ಕೊಂಚಾಡಿಯಲ್ಲಿ ಬಸ್ ಇಳಿಯುತ್ತಿದ್ದ ಚಂದ್ರಶೇಖರ್ ನಾಯ್ಕ್ ಎಂಬವರು ಬಸ್ ನ ಸಿಬ್ಬಂದಿ ಮತ್ತು ಚಾಲಕನ ನಿರ್ಲಕ್ಷತನದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಮೂಡಬಿದರೆಯಲ್ಲೂ ವಿದ್ಯಾರ್ಥಿಯೊಬ್ಬಳು ಬಸ್ ಹತ್ತುವ ಮುನ್ನವೇ ಬಸ್ ಚಲಾಯಿಸಿದ ಕಾರಣ ಬಸ್ ನಡಿಗೆ ಬಿದ್ದ ದೃಶ್ಯಗಳೂ ಕಂಡುಬಂದಿದ್ದು ಅದೃಷ್ಟವಶಾತ್ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಳು. ಇಂತಹ ಘಟನೆಗಳು ಹೆಚ್ಚದಂತೆ ಉಡುಪಿ ಎಸ್.ಪಿ ಬಸ್ ನಿರ್ವಾಹಕರಿಗೆ ಮತ್ತು ಚಾಲಕರಿಗೆ ಎಚ್ಚರಿಕೆ ನೀಡಿದಾರೆ.