ಮಧುರೈನಿಂದ ಮೌಂಟೇನ್ ವ್ಯೂನತ್ತ ಪಯಣಿಸಿದ ಸುಂದರ್ ಪಿಚೈಗೆ ಪದ್ಮಭೂಷಣ ಪ್ರಶಸ್ತಿಯ ಗರಿ

ಸ್ಯಾನ್ ಫ್ರಾನ್ಸಿಸ್ಕೋ: ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರಿಗೆ ಶುಕ್ರವಾರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ವ್ಯಾಪಾರ ಮತ್ತು ಉದ್ಯಮ ವಿಭಾಗದಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು. ಯುಎಸ್ ನಲ್ಲಿನ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರು ಪಿಚೈ ಅವರಿಗೆ ಪ್ರಶಸ್ತಿಯನ್ನು ಹಸ್ತಾಂತರಿಸಿದರು, ಇದು ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.

ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಅವರಿಗೆ ಪದ್ಮಭೂಷಣ ಹಸ್ತಾಂತರಿಸಲು ಸಂತೋಷವಾಗಿದೆ. ಮಧುರೈನಿಂದ ಮೌಂಟೇನ್ ವ್ಯೂಗೆ ಅವರ ಸ್ಪೂರ್ತಿದಾಯಕ ಪ್ರಯಾಣ, ಭಾರತ-ಅಮೆರಿಕಾ ಆರ್ಥಿಕ ಮತ್ತು ತಂತ್ರಜ್ಞಾನ ಬಾಂಧವ್ಯವನ್ನು ಬಲಪಡಿಸುತ್ತದೆ ಮತ್ತು ಜಾಗತಿಕ ಆವಿಷ್ಕಾರಕ್ಕೆ ಭಾರತೀಯ ಪ್ರತಿಭೆಗಳ ಕೊಡುಗೆಯನ್ನು ಪುನರುಚ್ಚರಿಸುತ್ತದೆ ಎಂದು ಭಾರತೀಯ ರಾಯಭಾರಿ ತರಂಜಿತ್ ಎಸ್ ಸಂಧು ಟ್ವೀಟ್ ಮಾಡಿ ತಿಳಿಸಿದ್ದಾರೆ.

ರಾಯಭಾರಿ ತರಂಜಿತ್ ಎಸ್ ಸಂಧು ಧನ್ಯವಾದಗಳು. ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದ್ದು, ಇಂದು ನನ್ನ ಕುಟುಂಬ ನನ್ನೊಂದಿಗೆ ಇರುವುದು ಅಪಾರ ಗೌರವವನ್ನು ತಂದಿದೆ. ಭಾರತ ಸರ್ಕಾರ ಮತ್ತು ಭಾರತದ ಜನತೆಗೆ ಕೃತಜ್ಞತೆಗಳು ಎಂದು ಪಿಚೈ ಟ್ವೀಟ್ ಮಾಡಿದ್ದಾರೆ.

ಈ ಅಗಾಧವಾದ ಗೌರವಕ್ಕಾಗಿ ನಾನು ಭಾರತ ಸರ್ಕಾರ ಮತ್ತು ಭಾರತದ ಜನರಿಗೆ ತುಂಬಾ ಕೃತಜ್ಞನಾಗಿದ್ದೇನೆ. ನನ್ನನ್ನು ರೂಪಿಸಿದ ದೇಶದಿಂದ ಈ ರೀತಿಯಾಗಿ ಗೌರವಿಸಲ್ಪಟ್ಟಿರುವುದು ನಂಬಲಾಗದಷ್ಟು ಅರ್ಥಪೂರ್ಣವಾಗಿದೆ. ಭಾರತವು ನನ್ನ ಒಂದು ಭಾಗವಾಗಿದೆ ಮತ್ತು ನಾನು ಎಲ್ಲಿಗೆ ಹೋದರೂ ಅದನ್ನು ನನ್ನೊಂದಿಗೆ ಕೊಂಡೊಯ್ಯುತ್ತೇನೆ. ನನ್ನ ಆಸಕ್ತಿಗಳನ್ನು ಅನ್ವೇಷಿಸಲು ನನಗೆ ಅವಕಾಶಗಳಿವೆ ಎಂದು ಖಚಿತಪಡಿಸಿಕೊಳ್ಳಲು ಸಾಕಷ್ಟು ತ್ಯಾಗ ಮಾಡಿದ ಪೋಷಕರೊಂದಿಗೆ ಕಲಿಕೆ ಮತ್ತು ಜ್ಞಾನವನ್ನು ಪ್ರೋತ್ಸಾಹಿಸುವ ಕುಟುಂಬದಲ್ಲಿ ಬೆಳೆದ ನಾನು ಅದೃಷ್ಟಶಾಲಿಯಾಗಿದ್ದೇನೆ ಎಂದು ಅವರು ತಮ್ಮ ವೈಯಕ್ತಿಕ ಬ್ಲಾಗ್ ನಲ್ಲಿ ಹೇಳಿದ್ದಾರೆ.

ಪಿಚೈ ತಮ್ಮ ಟಿಪ್ಪಣಿಯಲ್ಲಿ ಪಿಎಂ ನರೇಂದ್ರ ಮೋದಿಯವರ “ಡಿಜಿಟಲ್ ಇಂಡಿಯಾ ದೃಷ್ಟಿ” ಯನ್ನು ಶ್ಲಾಘಿಸಿ ಇದು ಪ್ರಗತಿಗೆ ವೇಗವರ್ಧವಾಗಿ ಇಂಬು ನೀಡುತ್ತಿದೆ ಎಂದಿದ್ದಾರೆ. ಭಾರತದಲ್ಲಿ ಎರಡು ದಶಕಗಳ ಗೂಗಲ್ ಪಾಲುದಾರಿಕೆಯ ಬಗ್ಗೆ ಹೆಮ್ಮೆ ವ್ಯಕ್ತ ಪಡಿಸಿದ್ದಾರೆ.

ಮಧುರೈ ಮೂಲದ ಪಿಚೈ ಅವರು ಈ ವರ್ಷದ ಆರಂಭದಲ್ಲಿ 17 ಪ್ರಶಸ್ತಿ ಪುರಸ್ಕೃತರಲ್ಲಿ ಒಬ್ಬರಾಗಿದ್ದರು. 73ನೇ ಗಣರಾಜ್ಯೋತ್ಸವದ ಮುನ್ನಾ ದಿನದಂದು ಪಿಚೈ ಅವರಿಗೆ ಪ್ರಶಸ್ತಿ ನೀಡಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.