ಹೆಬ್ರಿ: ಮುದ್ರಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸದಾಶಿವ ಸೇರ್ವೇಗಾರ್, ತಮ್ಮ ಅಧಿಕಾರ ದುರುಪಯೋಗ ಪಡಿಸಿ, ತನ್ನ ಸಹೋದರರಾದ ಪದ್ಮನಾಭ ಸೇರ್ವೆಗಾರ್ ಮತ್ತು ಸುರೇಶ್ ಸೇರ್ವೇಗಾರ್ ಎಂಬವರಿಗೆ, ಪೆರ್ಡೂರು ಗ್ರಾಮದ ಸ.ನಂ. 296 ರಲ್ಲಿ, 0.15 ಎಕ್ರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿ ಅನಧಿಕೃತವಾಗಿ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿರುವುದನ್ನು ಆಕ್ಷೇಪಿಸಿ, ಕಾಂಗ್ರೆಸ್ ಪಕ್ಷದ ವತಿಯಿಂದ ತೀವ್ರವಾದ ಪ್ರತಿಭಟನೆಯನ್ನು ಕೈಗೊಂಡು ತಾಲೂಕು ದಂಡಾಧಿಕಾರಿಗಳಿಗೆ ದೂರು ಸಲ್ಲಿಸಿ ಒತ್ತುವರಿ ಮಾಡಿಕೊಂಡು ನಿರ್ಮಿಸಿದ ಅಕ್ರಮ ಕಟ್ಟಡವನ್ನು ಅನಧಿಕೃತಗೊಳಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವನಿಯನ್ನು ಸಲ್ಲಿಸಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ತಾಲೂಕು ದಂಡಾಧಿಕಾರಿಯವರು, ಭೂ ಮಾಪಕರಿಂದ ಒತ್ತುವರಿಯಾಗಿರುವ ಸ್ಥಳದ ಅಳತೆ ಮಾಡಿಸಿ ಗ್ರಾ. ಪಂ. ಅಭಿವೃದ್ದಿ ಅಧಿಕಾರಿ ಮತ್ತು ಕಂದಾಯ ನಿರೀಕ್ಷಕರ ವರದಿಯ ಆಧಾರದಂತೆ ತಹಶೀಲ್ದಾರರು ದಿನಾಂಕ- 19/11/2022 ರಂದು ಹೊರಡಿಸಿರುವ ಆದೇಶದಲ್ಲಿ ಕರ್ನಾಟಕ ಭೂ-ಕಂದಾಯ ಕಾಯ್ದೆ 1964 ರ ಕಲಂ 104 ರನ್ವಯ, ಒತ್ತುವರಿದಾರರಾದ ಅನಂತ ಪದ್ಮನಾಭ ಸರ್ವೇಗಾರರು ಒತ್ತುವರಿ ಮಾಡಿರುವ ಜಮೀನನ್ನು ಮತ್ತು ಅದರಲ್ಲಿ ಕಾನೂನುಬಾಹಿರವಾಗಿ ನಿರ್ಮಿಸಲಾದ ಬಹುಮಹಡಿ ಕಟ್ಟಡವನ್ನು ಅನಧಿಕೃತವೆಂದು ತೀರ್ಮಾನಿಸಿ, ಕಟ್ಟಡವನ್ನು ಕೆಡವಲು ಆದೇಶ ನೀಡಿರುತ್ತಾರೆ.
ಕೆಲವೊಂದು ಭ್ರಷ್ಟ ಅಧಿಕಾರಿಗಳಿಂದ ಆಗುತ್ತಿರುವ ಅಧಿಕಾರ ದುರುಪಯೋಗದ ಬಗ್ಗೆ ಹಾಗೂ ಬಡಜನರ ಪರ ನಿರಂತರ ಧ್ವನಿಯೆತ್ತಿ ಹೋರಾಟ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕಿದ ಜಯ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.
ತಹಸೀಲ್ದಾರ್ ರವರು ಗ್ರಾಮ ಲೆಕ್ಕಿಗರಿಗೆ, ಗ್ರಾ.ಪಂ. ಅ. ಅಧಿಕಾರಿಯವರಿಗೆ ಹಾಗೂ ಕಂದಾಯ ನಿರೀಕ್ಷಕರಿಗೆ, ಪೊಲೀಸ್ ರಕ್ಷಣೆ ಪಡೆದು ಸದ್ರಿ ಸ್ಥಳವನ್ನು ಮತ್ತು ಅಕ್ರಮ ಕಟ್ಟಡವನ್ನು ಕೂಡಲೇ ತೆರವುಗೊಳಿಸಿ, ಸರ್ಕಾರದ ಸ್ವಾಧೀನಕ್ಕೆ ಒಳಪಡಿಸಬೇಕೆಂಬ ಆದೇಶ ಹೊರಡಿಸಿ ಹತ್ತು ದಿನಗಳಾದರೂ, ಸಂಬಂಧಪಟ್ಟ ಅಧಿಕಾರಿಗಳು ಇನ್ನೂ ಆದೇಶವನ್ನು ಕಾರ್ಯರೂಪಕ್ಕೆ ತರಲು ಹಿಂದೇಟು ಹಾಕುತ್ತಿರುವುದು ವಿಷಾದನೀಯ. ಸರ್ಕಾರಿ ಜಾಗದಲ್ಲಿ ಬಡವರು ವಾಸಿಸಲಿಕ್ಕೆಂದು ಮನೆ ನಿರ್ಮಾಣ ಮಾಡಿದರೆ, ತಕ್ಷಣ ಬಂದು ನೆಲಸಮ ಮಾಡುವ ಅಧಿಕಾರಿಗಳು, ಈ ಪ್ರಕರಣದಲ್ಲಿ ಯಾಕೆ ವಿಳಂಬನೀತಿ ಅನುಸರಿಸುತ್ತಿದ್ದಾರೆ?
ಆದಷ್ಟು, ಶೀಘ್ರವಾಗಿ ತಾಲೂಕು ದಂಡಾಧಾಕಾರಿಗಳ ಆದೇಶದಂತೆ ಅಕ್ರಮ ಕಟ್ಟಡವನ್ನು ನೆಲಸಮಗೊಳಿಸುವ ಕಾರ್ಯಾಚರಣೆ ಕೈಗೊಳ್ಳಬೇಕು ಮತ್ತು ಅಕ್ರಮವೆಸಗಿದ ಗ್ರಾ.ಪಂ. ಅ. ಅಭಿವೃದ್ಧಿ ಅಧಿಕಾರಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದಲ್ಲಿ ಇದರ ವಿರುದ್ಧ ಮತ್ತೊಮ್ಮೆ ಇನ್ನಷ್ಟು ತೀವ್ರ ಸ್ವರೂಪದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.