ಜಗತ್ಪ್ರಸಿದ್ದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಭ್ರಮದ ಚಂಪಾ ಷಷ್ಠಿ ಮಹೋತ್ಸವ

ಮಂಗಳೂರು: ಐತಿಹಾಸಿಕ ಮಾನ್ಯತೆಯಿರುವ ಕಾರ್ನಿಕದ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಮಹೋತ್ಸವವು ಸಂಭ್ರಮ-ಸಡಗರದಿಂದ ಜರುಗಿತು. ಮಂಗಳವಾರದಂದು ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನೆರವೇರಿತು.

ಕುಕ್ಕೆ ಸುಬ್ರಹ್ಮಣ್ಯ ದೇವರು ರಥದಲ್ಲಿ ಕುಳಿತು ರಥಬೀದಿಯಲ್ಲಿ ಸಂಚರಿಸಿ ಭಕ್ತರಿಗೆ ದರ್ಶನವನ್ನಿತ್ತರು.ವೃಶ್ಚಿಕ ಲಗ್ನದಲ್ಲಿ ದೇವರ ವಿಗ್ರಹಗಳ ಬ್ರಹ್ಮರಥಾರೋಹಣ ನಡೆಯಿತು. ಉಮಾಮಹೇಶ್ವರ ರಥೋತ್ಸವದ ಬಳಿಕ ಚಂಪಾಷಷ್ಠಿ ಮಹಾರಥೋತ್ಸವ ನಡೆಯಿತು. ಸೋಮವಾರ ರಾತ್ರಿ ಪಂಚಮಿ ರಥೋತ್ಸವ ನಡೆಯಿತು.

ಸುಮಾರು 163 ಭಕ್ತರು ಎಡೆಸ್ನಾನ ಸೇವೆ ನೆರವೇರಿಸಿದರು. ಗೋವಿಗೆ ನೈವೇದ್ಯ ಅರ್ಪಿಸಿದ ಎಲೆಯ ಮೇಲೆ ಭಕ್ತರು ಉರುಳು ಸೇವೆ ನಡೆಸುವ ಮೂಲಕ ಹರಕೆ ತೀರಿಸಿಕೊಂಡರು.

ಎಲ್ಲೆಲ್ಲೂ ವಿದ್ಯುತ್ ದೀಪ ಮತ್ತು ಹೂವಿನ ಅಲಂಕಾರದಿಂದ ಸಿಂಗರಿಸಲ್ಪಟ್ಟ ಬೀದಿಗಳು ಕಣ್ಮನ ಸೆಳೆದವು. ಮಹಾಪೂಜೆ ಬಳಿಕ ಹೊರಾಂಗಣ ಉತ್ಸವ, ತೇರು ಎಳೆಯುವಿಕೆ, ಬಂಡಿ ಉತ್ಸವ ಜರುಗಿದವು. ಮಂಗಳವಾದ್ಯಗಳ ಮಧ್ಯೆ ಕುಕ್ಕೆ ಬೆಡಿಯ ಚಿತ್ತಾರದೊಂದಿಗೆ ರಥೋತ್ಸವ ನೆರವೇರಿತು. ಸವಾರಿಕಟ್ಟೆಯಲ್ಲಿ ಕಟ್ಟೆ ಪೂಜೆಯನ್ನು ನಡೆಸಲಾಯಿತು.

ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ನೆರೆದು ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದು ಕೃತಾರ್ಥರಾದರು.

ಉತ್ಸವದ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ 626ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. 49 ಪಿಎಸ್ಐ, 14 ಇನ್​ಸ್ಪೆಕ್ಟರ್, 16 ಎಸಿಪಿ, 158 ಎಎಸ್ಐ, 148 ಹೆಡ್​ಕಾಸ್ಟೇಬಲ್, 236 ಪಿಸಿ, 22 ಹೋಂಗಾರ್ಡ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.