ಮಣಿಪಾಲ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಇದರ ಮಣಿಪಾಲ ಬ್ಯಾಂಕಿನ ನೂತನ ಎಟಿಎಂ ಶಾಖೆ ಭಾನುವಾರದಂದು ಮಣಿಪಾಲದ ಕಮರ್ಷಿಯಲ್ ಕಾಂಪ್ಲೆಕ್ಸ್ ನ ನೆಲ ಅಂತಸ್ತಿನಲ್ಲಿ ಉದ್ಘಾಟನೆಗೊಂಡಿತು.
ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ. ಎಮ್.ಎನ್. ರಾಜೇಂದ್ರ ಕುಮಾರ್ ಎಟಿಎಂ ಅನ್ನು ಉದ್ಘಾಟಿಸಿ ಮಾತನಾಡಿ, ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ ಆಸ್ತಿಯೆಂದರೆ ಅದು ನವೋದಯ ಸ್ವ-ಸಹಾಯ ಸಂಘದ ಮಹಿಳೆಯರು. ಎಸ್.ಸಿ.ಡಿ.ಸಿ.ಸಿಯು ಎಲ್ಲಾ ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕ್ ಗಳಿಗಿಂತ ಹೆಚ್ಚು ಬಡ್ಡಿಯನ್ನು (8%) ಠೇವಣಿದಾರರಿಗೆ ನೀಡುತ್ತಿದೆ. ನಮ್ಮ ಬ್ಯಾಂಕಿನಲ್ಲಿ ಉಳಿತಾಯ ಮಾಡುವ ಮಹಿಳೆಯರಿಗೆ, ಮಾಜಿ ಮತ್ತು ಕರ್ತವ್ಯನಿರತ ಯೋಧರಿಗೆ 0.05% ಬಡ್ಡಿಯನ್ನು ನೀಡುತ್ತಿದೆ.
ಪ್ರಧಾನಿ ಮೋದಿಯವರ ಇಚ್ಚೆಯಂತೆ ನಗದು ರಹಿತ ವ್ಯವಹಾರ ನಡೆಸಲು ಎ.ಟಿ.ಎಮ್ ಗಳನ್ನು ತೆರೆಯಲಾಗುತ್ತಿದ್ದು, ಈ ನಿಟ್ಟಿನಲ್ಲಿ 8 ನೇ ಎಟಿಎಂ ಅನ್ನು ಬೆಳ್ತಂಗಡಿಯಲ್ಲಿ ಉದ್ಘಾಟನೆ ಮಾಡಲಿದ್ದೇವೆ ಮತ್ತು ಮಹಿಳೆಯರಿಗೆ ಎಟಿಎಂ ಬಳಕೆಯ ಬಗ್ಗೆ ತರಬೇತಿಯನ್ನು ನೀಡಲಿದ್ದೇವೆ ಎಂದರು.
ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಇಂದ್ರಾಳಿ ಜಯಕರ್ ಶೆಟ್ಟಿ ಮಾತನಾಡಿ, ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ 7 ನೇ ಎಟಿಎಮ್ ಶಾಖೆ ಇದಾಗಿದ್ದು, ಜನರ ಅಗತ್ಯತೆಗೆ ತಕ್ಕಂತೆ ಎಟಿಎಂ ಆರಂಭಿಸಿದ್ದೇವೆ. ಗ್ರಾಹಕರು ಇದನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಹೇಳಿದರು.
ಕಾರ್ಯಕ್ರಮದಲ್ಲಿ ಉಜ್ವಲ್ ಡೆವಲಪರ್ಸ್ ನ ಪುರುಷೋತ್ತಮ್ ಪಿ. ಶೆಟ್ಟಿ, ಬ್ಯಾಂಕಿನ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ರಾಜು ಪೂಜಾರಿ, ಬಿ.ಅಶೋಕ್ ಕುಮಾರ್ ಶೆಟ್ಟಿ, ಮಹೇಶ್ ಹೆಗ್ಡೆ ಮೊಳಹಳ್ಳಿ, ರಾಜೇಶ್ ರಾವ್ ಪಾಂಗಾಳ, ಜಯರಾಜ್ ಶೆಟ್ಟಿ, ಸಹಕಾರ ಸಂಘಗಳ ಉಪನಿಬಂಧಕ ಲಕ್ಷ್ಮೀನಾರಾಯಣ ಜಿ.ಎನ್, ಕೆ.ಎಮ್.ಸಿ ಮಣಿಪಾಲದ ಅಧಿಕಾರಿ ಜೈ ವಿಠ್ಠಲ್ ಉಪಸ್ಥಿತರಿದ್ದರು.
ಬ್ಯಾಂಕಿನ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ (ಪ್ರಭಾರ) ವಂದಿಸಿ, ಶಾಖಾ ವ್ಯವಸ್ಥಾಪಕ ವರದರಾಜ್ ಶೆಟ್ಟಿ ನಿರೂಪಿಸಿದರು.