ನವದೆಹಲಿ: ಹರಿಯಾಣದ ಆದಂಪುರ, ಬಿಹಾರದ ಮೊಕಮಾ ಮತ್ತು ಗೋಪಾಲ್‌ಗಂಜ್, ಮಹಾರಾಷ್ಟ್ರದ ಅಂಧೇರಿ (ಪೂರ್ವ), ತೆಲಂಗಾಣದ ಮುನುಗೋಡೆ, ಉತ್ತರ ಪ್ರದೇಶದ ಗೋಲ ಗೋಕ್ರನಾಥ ಮತ್ತು ಒಡಿಶಾದ ಧಾಮ್‌ನಗರ ಈ ಏಳು ಕ್ಷೇತ್ರಗಳಲ್ಲಿ ನವೆಂಬರ್ 3 ರಂದು ತೆರವಾದ ಸ್ಥಾನಗಳಿಗೆ ಉಪ-ಚುನಾವಣೆ ನಡೆದಿತ್ತು.
ನವೆಂಬರ್ 6 ರಂದು ಫಲಿತಾಂಶ ಪ್ರಕಟವಾಗಿದ್ದು, ಒಡಿಶಾದ ಧಾಮ್‌ನಗರ, ಬಿಹಾರದ ಗೋಪಾಲ್‌ಗಂಜ್, ಹರಿಯಾಣದ ಆದಂಪುರ ಮತ್ತು ಉತ್ತರ ಪ್ರದೇಶದ ಗೋಲಾ ಗೋಕ್ರನಾಥದಲ್ಲಿ ಬಿಜೆಪಿ ಗೆದ್ದರೆ, ಅಂಧೇರಿಯಲ್ಲಿ (ಪೂರ್ವ) ಉದ್ಧವ್ ಠಾಕ್ರೆ ನೇತೃತ್ವದ ಸೇನೆಯ ರುತುಜಾ ಲಟ್ಕೆ ಗೆದ್ದಿದ್ದಾರೆ. ಬಿಹಾರದ ಮೊಕಾಮಾದಲ್ಲಿ ಆರ್‌ಜೆಡಿಯ ನೀಲಮ್ ದೇವಿ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ತೆಲಂಗಾಣದ ಮುನುಗೋಡೆ ಉಪಚುನಾವಣೆಯಲ್ಲಿ ಟಿಆರ್‌ಎಸ್‌ನ ಕುಸುಕುಂಟ್ಲಾ ಪ್ರಭಾಕರ್ ರೆಡ್ಡಿ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಮತ್ತು ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ ಅವರ ಮೊಮ್ಮಗ ಭವ್ಯ ಬಿಷ್ಣೋಯ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಜೈ ಪ್ರಕಾಶ್ ಅವರನ್ನು ಹರಿಯಾಣದ ಆದಂಪುರದಲ್ಲಿ ಸುಮಾರು 16,000 ಮತಗಳ ಅಂತರದಿಂದ ಸೋಲಿಸಿ ಕುಟುಂಬದ ಗೆಲುವಿನ ಓಟವನ್ನು ಉಳಿಸಿಕೊಂಡಿದ್ದಾರೆ.
ಬಿಜೆಪಿ ಸೇರಿದಂತೆ ಪ್ರಮುಖ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸದ ಕಾರಣ ಶಿವಸೇನೆಯ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಅಭ್ಯರ್ಥಿ ರುತುಜಾ ಲಟ್ಕೆ, ಮುಂಬೈನ ಅಂಧೇರಿ (ಪೂರ್ವ) ಗೆ ನಡೆದ ಉಪಚುನಾವಣೆಯಲ್ಲಿ ಗೆದ್ದಿದ್ದಾರೆ.
ಟಿಆರ್‌ಎಸ್ ( ಭಾರತ್ ರಾಷ್ಟ್ರ ಸಮಿತಿ ) ಅಭ್ಯರ್ಥಿ ಕುಸುಕುಂಟ್ಲ ಪ್ರಭಾಕರ ರೆಡ್ಡಿ ಅವರು ತಮ್ಮ ಸಮೀಪದ ಬಿಜೆಪಿ ಪ್ರತಿಸ್ಪರ್ಧಿ ಕೋಮಟಿರೆಡ್ಡಿ ರಾಜ್ ಗೋಪಾಲ್ ರೆಡ್ಡಿ ಅವರನ್ನು ಮುನುಗೋಡಿನಲ್ಲಿ 10,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದಾರೆ.
ಪೋಲಾದ ಮತಗಳಲ್ಲಿ ಆರನೇ ಒಂದು ಭಾಗವನ್ನು ಪಡೆಯಲು ವಿಫಲರಾದ್ದರಿಂದ ಆಪ್ ಮತ್ತು ಐ.ಎನ್.ಎಲ್.ಡಿ ನ ಅಭ್ಯರ್ಥಿಗಳು ತಮ್ಮ ಠೇವಣಿಗಳನ್ನು ಕಳೆದುಕೊಂಡಿದ್ದಾರೆ.
ನವೆಂಬರ್ 3 ರ ಉಪಚುನಾವಣೆಯ ಫಲಿತಾಂಶವು ಪ್ರಧಾನಿ ನರೇಂದ್ರ ಮೋದಿ ಅವರ ನೀತಿಗಳ ಮೇಲೆ ಜನರ ಅನುಮೋದನೆಯ ಮುದ್ರೆಯಾಗಿದೆ ಎಂದು ಬಿಜೆಪಿ ಹೇಳಿದೆ.