ಗುಜರಾತ್ ಚುನಾವಣೆ: ಡಿ. 1 ಮತ್ತು 5 ರಂದು ಮತದಾನ: ಡಿ. 8 ರಂದು ಮತ ಎಣಿಕೆ

ಅಹಮದಾಬಾದ್: ಗುಜರಾತಿನಲ್ಲಿ ಚುನಾವಣಾ ಕಣ ಸಜ್ಜಾಗಿದ್ದು, ಬಿರುಸಿನ ಪ್ರಚಾರಗಳಿಗೆ ತೆರೆಬಿದ್ದಿದ್ದು ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಇದೀಗ ಭಾರತೀಯ ಚುನಾವಣಾ ಆಯೋಗವು ಮತದಾನದ ದಿನಾಂಕಗಳನ್ನು ಘೋಷಣೆ ಮಾಡಿದೆ. ಇನ್ನೇನಿದ್ದರೂ ಮತದಾರ ಪ್ರಭುವಿನ ಮುದ್ರೆ ಒತ್ತುವಿಕೆ ಒಂದೇ ಬಾಕಿ ಉಳಿದಿದೆ.

ಗುಜರಾತಿನ ಎಲ್ಲಾ 182 ವಿಧಾನಸಭಾ ಸ್ಥಾನಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದ ವಿಧಾನಸಭಾ ಚುನಾವಣೆ ಡಿಸೆಂಬರ್ 1 ರಂದು ನಡೆಯಲಿದ್ದು, ಎರಡನೇ ಹಂತ ಡಿಸೆಂಬರ್ 5 ರಂದು ನಡೆಯಲಿದೆ. ಡಿಸೆಂಬರ್ 8 ರಂದು ಗುಜರಾತ್ ವಿಧಾನಸಭಾ ಚುನಾವಣೆಯ ಮತ್ತು ಹಿಮಾಚಲ ಪ್ರದೇಶದ ಫಲಿತಾಂಶಗಳು ಪ್ರಕಟಗೊಳ್ಳಲಿವೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

182 ಸದಸ್ಯ ಬಲದ ಗುಜರಾತ್ ವಿಧಾನಸಭೆಯ ಅವಧಿ ಫೆಬ್ರವರಿ 2023ಕ್ಕೆ ಕೊನೆಗೊಳ್ಳುತ್ತಿದ್ದು, ಈ ಬಾರಿಯ ಚುನಾವಣೆ ಕುತೂಹಲ ಕೆರಳಿಸಿದೆ. ಮತದಾರ ಪ್ರಭುವಿನ ಕೃಪಾಕಟಾಕ್ಷ ಯಾರ ಕಡೆಗಿದೆ ಎನ್ನುವುದು ಡಿಸೆಂಬರ್ 8 ರಂದು ಬಹಿರಂಗವಾಗಲಿದೆ.