ಕಾಂತಾರ ಕಂಡು ಆನಂದಿಸಿದ ಕೋಟ ಶ್ರೀನಿವಾಸ ಪೂಜಾರಿ: ರಿಷಭ್ ಶೆಟ್ಟಿಗೆ ಅಭಿನಂದನೆ ಎಂದ ಸಚಿವರು                                                 

 

ಕೋಟ:   ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇವರು ಗುರುವಾರ ದೈವ ನರ್ತಕರು, ಕಲಾವಿದರು ಹಾಗೂ ದೈವ ಪಾತ್ರಿಗಳ ಜೊತೆಯಲ್ಲಿ ಕಾಂತಾರ ಚಲನಚಿತ್ರವನ್ನು ವೀ ಕ್ಷಿಸಿದರು.

ಗಲ್ಲಾ ಪೆಟ್ಟಿಗೆಯನ್ನು ಕೊಳ್ಳೆ ಹೊಡೆಯುತ್ತಿರುವ, ಜನರನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ಯುವ ಕರಾವಳಿಯ ಜೀವನಾಡಿಯ ಕಾಂತಾರ ಚಲನಚಿತ್ರವನ್ನು ಕೋಟೇಶ್ವರದ ಭಾರತ್ ಸಿನಿಮಾ ಮಂದಿರದಲ್ಲಿ ಸಚಿವರು ನೋಡಿದರು. ಈ ಸಂದರ್ಭದಲ್ಲಿ ಚಲನಚಿತ್ರ ನೋಡಲು ಆಗಮಿಸಿದ್ದ ದೈವ ನರ್ತಕರನ್ನು ಹಾಗೂ ಚಲನಚಿತ್ರದಲ್ಲಿ ಭಾಗವಹಿಸಿ ಪಾತ್ರ ನಿರ್ವಹಣೆ ಮಾಡಿರುವ ಕಲಾವಿದರನ್ನು ಸಚಿವರು ಸನ್ಮಾನಿಸಿ ಗೌರವಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ದೈವ ನರ್ತಕರೊಂದಿಗೆ ಕುಳಿತು ಸಿನಿಮಾ ನೋ ಡಿರುವುದು ಬಹಳ ಸಂತೋಷವಾಗಿದೆ. ನನ್ನ ಇಲಾಖೆಗೆ ಸಂಬಂಧಪಟ್ಟ ಚಿತ್ರವಾಗಿರುವುದರಿಂದ ಚಲನಚಿತ್ರವನ್ನು ವೀಕ್ಷಿಸಿದ್ದೇನೆ. ನನ್ನೊಂದಿಗೆ 120 ಮಂದಿ ದೈವ ನರ್ತಕರು ಕೂಡ ಖುಷಿಪಟ್ಟಿದ್ದಾರೆ. ಚಿತ್ರಕ್ಕಾಗಿ ರಿಷಬ್ ಶೆಟ್ಟಿಯವರನ್ನು ಅಭಿನಂದಿಸುತ್ತೇನೆ ಎಂದರು.