ಉಡುಪಿ: ಕೇಂದ್ರ ಸರ್ಕಾರ ಕಳೆದ ಬಾರಿ ಎಂಒ ಭತ್ತ ಖರೀದಿಗೆ ಅನುಮತಿ ನೀಡುವಾಗ ತಡವಾದ ಕಾರಣ ನಿರೀಕ್ಷಿತ ಪ್ರಮಾಣದಲ್ಲಿ ಕುಚ್ಚಲಕ್ಕಿ ಲಭ್ಯವಾಗಿಲ್ಲ. ಆದರೆ, ಈ ಬಾರಿ ಕಟಾವಿಗೆ ಪೂರ್ವದಲ್ಲೇ ಅನುಮತಿ ಲಭಿಸಿದ್ದು, ರಾಜ್ಯ ಸರ್ಕಾರ ಶೀಘ್ರದಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆದಾಗ ಕರಾವಳಿ ಭಾಗದ ಜನರಿಗೆ ಪಡಿತರದಲ್ಲಿ ಕುಚ್ಚಲಕ್ಕಿ ನೀಡಲು ಸಾಧ್ಯವಾಗುತ್ತದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರ, ಲಘು ಉದ್ಯೋಗ ಭಾರತಿ ಮತ್ತು ಐಎಂಎಸ್ ಫೌಂಡೇಶನ್ ಆಶ್ರಯದಲ್ಲಿ ಶುಕ್ರವಾರ ನಡೆದ ಕರಾವಳಿ ಕರ್ನಾಟಕ ಕೃಷಿ ಉತ್ಪನ್ನ ರಫ್ತುದಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿಕರು ಬೆಳೆದಿರುವ ಗುಣಮಟ್ಟದ ಉತ್ಪನ್ನಗಳನ್ನು ರಫ್ತು ಮಾಡಲು ಕೇಂದ್ರ ಸರ್ಕಾರ ಹೆಚ್ಚಿನ ಉತ್ತೇಜನ ನೀಡುತ್ತಿದೆ.
ಕೃಷಿ ರಫ್ತು ಉತ್ತೇಜನಕ್ಕೆ ಕೈಗಾರಿಕಾ ಇಲಾಖೆಯಲ್ಲಿ ಪ್ರತ್ಯೇಕ ವಿಭಾಗ ಪ್ರಾರಂಭಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದ್ದು, ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.
ಸ್ವಾತಂತ್ರ್ಯಾನಂತರದಲ್ಲಿ ಕೈಗಾರಿಕೀರಣಕ್ಕೆ ಹೆಚ್ಚು ಒತ್ತುನೀಡಲಾಯಿತು. ಅದರಿಂದ ಕೃಷಿ ಕ್ಷೇತ್ರ ಹಿಂದುಳಿಯುವಂತಾಯಿತು. ಆರಂಭದಲ್ಲಿಯೇ ಕೃಷಿಗೆ ಆದ್ಯತೆ ನೀಡಿದ್ದರೆ ಅನ್ನಕ್ಕಾಗಿ ಬೇರೆ ದೇಶಗಳಿಗೆ ಕೈಯೊಡ್ಡುವ ಪರಿಸ್ಥಿತಿ ಬರುತ್ತಿರಲಿಲ್ಲ. ಅಂದಿನ ಕಾಲದಲ್ಲಿ ಆರಂಭಿಸಿರುವ ಕೈಗಾರಿಕೆಗಳು ಈಗ ಬಾಗಿಲು ಮುಚ್ಚಿವೆ. ಭಾರತದಲ್ಲಿ ಬೆಳೆಯುವ ತರಕಾರಿ, ಹಣ್ಣು, ದವಸ ಧಾನ್ಯಗಳಿಗೆ ವಿದೇಶದಲ್ಲಿ ಬೇಡಿಕೆ ಇದೆ. ಯಾವ ದೇಶದಲ್ಲಿ ಯಾವ ಉತ್ಪನ್ನಗಳಿಗೆ ಬೇಡಿಕೆ ಇದೆ ಎನ್ನುವುದನ್ನು ಗಮನಿಸಿಕೊಂಡು ಅದಕ್ಕೆ ಅನುಗುಣವಾಗಿ ಆಹಾರ ಪದಾರ್ಥಗಳನ್ನು ಬೆಳೆದು ಜಾಗತಿಕ ಮಾರುಕಟ್ಟೆ ತಲುಪಬಹುದು ಎಂದು ಹೇಳಿದರು.
ಕೇಂದ್ರ ಸರ್ಕಾರದ ಅಪೇಡಾ ಸಂಸ್ಥೆ ಅಧ್ಯಕ್ಷ ಡಾ. ಎಂ. ಅಂಗಮುತ್ತು, ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಡಾ. ಎಂ. ವಿ. ವೆಂಕಟೇಶ್, ನಬಾರ್ಡ್ ಪ್ರಧಾನ ವ್ಯವಸ್ಥಾಪಕ ಟಿ. ರಮೇಶ್, ಕಪೆಕ್ ಎಂ.ಡಿ. ಪರ್ವೆಜ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.