ಉಡುಪಿ: ಅಪ್ಪಟ ಕರಾವಳಿಯ ಸೊಗಡನ್ನು ಹೊಂದಿರುವ ಕಾಂತಾರಾ ಕನ್ನಡ ಚಲನಚಿತ್ರವು ಶುಕ್ರವಾರ ಬಿಡುಗಡೆಹೊಂದಿದ್ದು, ಚಿತ್ರವನ್ನು ವೀಕ್ಷಿಸಿದವರೆಲ್ಲರಿಂದಲೂ ಒಳ್ಳೆಯ ವಿಮರ್ಶೆಗಳು ಬಂದಿವೆ. ತುಳುನಾಡಿನ ಭೂತ ಕೋಲ ಮತ್ತು ಕಂಬಳಗಳನ್ನು ಚಿತ್ರಿಸಿರುವ ಈ ಸಿನಿಮಾವು ತುಳುವರಲ್ಲದವರ ಮನಸ್ಸನ್ನೂ ಸೂರೆಗೊಂಡಿರುವುದು ವಿಶೇಷ.
ಬಂಡಾಯ ನಾಯಕ ಶಿವನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿರುವ ರಿಷಭ್ ಶೆಟ್ಟಿ ಅಭಿನಯಕ್ಕೆ ಅಭಿಮಾನಿಗಳೆಲ್ಲಾ ಮನಸೋತಿದ್ದಾರೆ. ಈ ಚಿತ್ರದಲ್ಲಿ ಕಂಬಳ ಓಡಿಸುವುದನ್ನು ಡ್ಯೂಪ್ ಇಲ್ಲದೆ ತಾನೇ ನಿರ್ವಹಿಸಿರುವ ರಿಷಬ್ ಇದಕ್ಕಾಗಿ ತಮ್ಮ ಹುಟ್ಟೂರಿನಲ್ಲಿ ಹಲವು ದಿನಗಳ ಕಾಲ ಅಭ್ಯಾಸ ಮಾಡಿದ್ದಾರೆ.
ಅರಣ್ಯ ಇಲಾಖೆ ಮತ್ತು ಅರಣ್ಯದೊಳಗಡೆ ಬದುಕು ಕಟ್ಟಿಕೊಂಡಿರುವ ಮುಗ್ದ ಜೀವಿಗಳ ಮಧ್ಯದ ಜಿದ್ದಾಜಿದ್ದಿಯ ಕಥಾ ಹಂದರವನ್ನು ಈ ಚಲನಚಿತ್ರವು ಹೊಂದಿದ್ದು, ಕರಾವಳಿಯ ಆಚರಣೆಗಳನ್ನೆಲ್ಲಾ ಮನೋಜ್ಞವಾಗಿ ತೋರಿಸಲಾಗಿದೆ ಎಂದು ವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ. ಚಿತ್ರದ ಕ್ಯಾಮೆರಾ ವರ್ಕ್ ಮತ್ತು ಸ್ಟಂಟ್ ಕೂಡಾ ಅದ್ಭುತವಾಗಿ ಮೂಡಿಬಂದಿದೆ.
ನಾಯಕಿ ಸಪ್ತಮಿ ಗೌಡ, ಅಚ್ಯುತ್, ಕಿಶೋರ್, ಪ್ರಮೋದ್ ಶೆಟ್ಟಿ, ರಘು ಪಾಂಡೇಶ್ವರ, ಮಾನಸಿ ಸುಧೀರ್, ತುಳು ರಂಗಭೂಮಿಯ ಖ್ಯಾತ ನಟರಾದ ನವೀನ್ ಡಿ. ಪಡೀಲ್, ದೀಪಕ್ ರೈ ಪಾಣಾಜೆ, ಪ್ರಕಾಶ್ ತೂಮಿನಾಡ್, ಜ್ಯೋತಿಶ್ ಶೆಟ್ಟಿ, ಮೈಮ್ ರಾಮ್ ದಾಸ್, ಪುಷ್ಪರಾಜ್ ಶೆಟ್ಟಿ ಎಲ್ಲರೂ ತಮ್ಮ ಪಾತ್ರದಲ್ಲಿ ಮಿಂಚಿದ್ದಾರೆ. ವಿಜಯ್ ಪ್ರಕಾಶ್ ಹಾಡು ಮನಸೂರೆಗೊಳ್ಳುವಂತಿದೆ ಎನ್ನುತ್ತಿರುವ ಸಿನಿಪ್ರೇಕ್ಷಕ ಹೊಂಬಾಳೆ ಫಿಲಂಸ್ ಅನ್ನು ಮತ್ತೊಮ್ಮೆ ಗೆಲ್ಲಿಸಿದ್ದಾನೆ.
 
								 
															





 
															 
															 
															











