ನವದೆಹಲಿ: ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ) ಅವರನ್ನು ಮುಂದಿನ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಆಗಿ ನೇಮಿಸಲಾಗಿದೆ ಎಂದು ಭಾರತ ಸರ್ಕಾರ ಬುಧವಾರ ತಿಳಿಸಿದೆ. ಅವರು ಭಾರತ ಸರ್ಕಾರದ ಮಿಲಿಟರಿ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಡಿಸೆಂಬರ್ 2021 ರಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಮೊದಲ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಮರಣದ ಒಂಬತ್ತು ತಿಂಗಳ ನಂತರ ಚೌಹಾಣ್ ಅವರನ್ನು ಸಿಡಿಎಸ್ ಆಗಿ ನೇಮಿಸಲಾಗಿದೆ.
ಚೌಹಾಣ್ ರವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ಖಡಕ್ವಾಸ್ಲಾ ಮತ್ತು ಇಂಡಿಯನ್ ಮಿಲಿಟರಿ ಅಕಾಡೆಮಿ, ಡೆಹ್ರಾಡೂನ್‌ನ ಹಳೆಯ ವಿದ್ಯಾರ್ಥಿ. ಅವರನ್ನು 11 ಗೂರ್ಖಾ ರೈಫಲ್ಸ್, ಭಾರತೀಯ ಸೇನೆಯ ಗೂರ್ಖಾ ರೆಜಿಮೆಂಟ್ ನಲ್ಲಿ 1981ರಲ್ಲಿ ನಿಯೋಜಿಸಲಾಯಿತು. ಮೇಜರ್ ಜನರಲ್ ಶ್ರೇಣಿಯಲ್ಲಿದ್ದಾಗ ಅವರು ಉತ್ತರ ಕಮಾಂಡ್‌ನ ನಿರ್ಣಾಯಕ ಬಾರಾಮುಲ್ಲಾ ಪ್ರದೇಶದಲ್ಲಿ ಪದಾತಿಸೈನ್ಯದ
ವಿಭಾಗದ ಮೇಲ್ವಿಚಾರಣೆ ಮಾಡಿದ್ದಾರೆ. ಲೆಫ್ಟಿನೆಂಟ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿದ್ದಾಗ ಈಶಾನ್ಯದಲ್ಲಿ ಕಾರ್ಪ್ಸ್ ಅನ್ನು ಕಮಾಂಡ್ ಮಾಡಿದ ಅನುಭವ ಹೊಂದಿದ್ದಾರೆ. ಸೆಪ್ಟೆಂಬರ್ 2019 ರಿಂದ ಸೇವೆಯಿಂದ ನಿವೃತ್ತಿಯಾಗುವವರೆಗೆ, ಅವರು ಪೂರ್ವ ಕಮಾಂಡ್‌ನ ಪ್ರಧಾನ ಕಮಾಂಡಿಂಗ್-ಇನ್-ಚೀಫ್ ಆಗಿ ಸೇವೆ ಸಲ್ಲಿಸಿದ್ದಾರೆ.
ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರಾಗಿ ಗಮನಾರ್ಹ ಸೇವೆ ಸಲ್ಲಿಸಿರುವ ಚೌಹಾಣ್ ಈ ಹಿಂದೆ ವಿಶ್ವಸಂಸ್ಥೆಯ ಕಾರ್ಯಾಚರಣೆಯಲ್ಲಿ ಅಂಗೋಲಾದಲ್ಲಿ ಸೇವೆ ಸಲ್ಲಿಸಿದ್ದಾರೆ. ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ) ಸೇನೆಯಲ್ಲಿನ ತನ್ನ ಗೌರವಾನ್ವಿತ ಮತ್ತು ಅತ್ಯುತ್ತಮ ಸೇವೆಗಾಗಿ ಪರಮ ವಿಶಿಷ್ಟ ಸೇವಾ ಪದಕ, ಉತ್ತಮ ಯುದ್ಧ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಸೇನಾ ಪದಕ ಮತ್ತು ವಿಶಿಷ್ಟ ಸೇವಾ ಪದಕಗಳನ್ನು ಪಡೆದಿದ್ದಾರೆ.
ಮೇ 31, 2021 ರಂದು ಸೆವೆಯಿಂದ ನಿವೃತ್ತರಾದರೂ ರಾಷ್ಟ್ರೀಯ ಭದ್ರತಾ ಸಮಸ್ಯೆಗಳಿಗೆ ಕೊಡುಗೆ ನೀಡುವುದನ್ನು ಮುಂದುವರೆಸಿದ್ದಾರೆ.