ಕಾರ್ಕಳ: ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳನ್ನು ಉದ್ಯೋಗಾವಕಾಶಕ್ಕೆ ಬೇಕಾದ ರೀತಿಯ ಎಲ್ಲಾ ಕೌಶಲ್ಯತೆಗಳೊಂದಿಗೆ ಅಣಿಗೊಳಿಸುವುದು ಅಗತ್ಯ. ಪ್ರಸ್ತುತ ದಿನಗಳಲ್ಲಿ ಕಾಣಲಾಗುತ್ತಿರುವ ತಂತ್ರಜ್ಞಾನದ ಬೆಳವಣಿಗೆಯನ್ನು ನಾವೆಲ್ಲರೂ ಅರಗಿಸಿಕೊಳ್ಳುವ ಮನಸ್ಥಿತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಬಾಶ್ ಗ್ಲೋಬಲ್ ಸಾಫ್ಟ್ವೇರ್ ಟೆಕ್ನಾಲಜೀಸ್ ಪ್ರೈ ಲಿ ಬೆಂಗಳೂರಿನ ಉಪಾಧ್ಯಕ್ಷ ಮತ್ತು ಜಾಗತಿಕ ನಿರ್ದೇಶಕ ಗುರುಪ್ರಸಾದ್ ಎಸ್ ಅಭಿಪ್ರಾಯಪಟ್ಟರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗವು ಇಎಸಿ, ಐಇಇಇ ಮಂಗಳೂರು ಸಬ್ ಸೆಕ್ಷನ್, ಐಇಇಇ ಸ್ಟೂಡೆಂಟ್ ಬ್ರಾಂಚ್, ಎನ್.ಎಂ.ಎ.ಎಂ.ಐ.ಟಿ ಹಾಗೂ ಇಂಟರ್ನಲ್ ಕ್ವಾಲಿಟಿ ಎಶ್ಯೂರೆನ್ಸ್ ಸೆಲ್ ನ ಸಹಯೋಗದಲ್ಲಿ ಸೆ.26 ರಿಂದ ಸೆ.28 ರವರೆಗೆ ಹಮ್ಮಿಕೊಂಡಿರುವ ‘ಸೈಬರ್ ಫಿಸಿಕಲ್ ಸಿಸ್ಟಮ್ಸ್’ ಎಂಬ ವಿಷಯದ ಬಗೆಗಿನ ಮೂರು ದಿನಗಳ ಶಿಕ್ಷಕರ ಜ್ಞಾನವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಸೃಜನಾತ್ಮಕವಾಗಿ ಯೋಚಿಸಿ ಅಂತರ್ ವಿಷಯಕ ಸಂಶೋಧನೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಬೇಕಿದೆ ಎಂದರು.
ಕಾರ್ಯಕ್ರಮಕ್ಕೆ ಗೌರವ ಅತಿಥಿಯಾಗಿ ಆಗಮಿಸಿದ್ದ ಐಇಇಇ ಮಂಗಳೂರು ಸಬ್ ಸೆಕ್ಷನ್ ನ ಅಧ್ಯಕ್ಷೆ ಡಾ.ಪೂರ್ಣಲತಾ ಜಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ ಎನ್ ಚಿಪ್ಳೂಣ್ಕರ್ ಮಾತನಾಡಿ, ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗವು ‘ಸೈಬರ್ ಫಿಸಿಕಲ್ ಸಿಸ್ಟಮ್ಸ್’ ಬಗೆಗಿನ ಕಾರ್ಯಾಗಾರವನ್ನು ಹಮ್ಮಿಕೊಂಡಿರುವುದು ಸಂತಸ ತಂದಿದೆ. ಈಗಿನ ತಂತ್ರಜ್ಞಾನದ ಯುಗಕ್ಕೆ ಇಂತಹ ಕಾರ್ಯಾಗಾರ-ವಿಷಯ ಬಹಳ ಪ್ರಸ್ತುತವೆನಿಸುತ್ತದೆ. ನಮ್ಮ ಸಂಸ್ಥೆಯು ಇಂದು ಪಠ್ಯ ಮತ್ತು ಪಠ್ಯೇತರವಾಗಿ ಮಾತ್ರವಲ್ಲದೆ ಪ್ರಾಯೋಗಿಕವಾಗಿಯೂ ಬೆಳೆಯುತ್ತಿದೆ. ಇಂತಹ ಪ್ರಾಯೋಗಿಕ ಜ್ಞಾನವೃದ್ಧಿ ಕಾರ್ಯಕ್ರಮಗಳ ಪೂರ್ಣ ಸದುಪಯೋಗವನ್ನು ಪ್ರಾಧ್ಯಾಪಕರು ಪಡೆದುಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಎನ್.ಐ.ಟಿ.ಕೆಯ ಇನ್ಫೋರ್ಮೇಶನ್ ಟೆಕ್ನಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕಿರಣ್ ಎಂ ಹಾಗೂ ಶಿಕ್ಷಕರ ಜ್ಞಾನವೃದ್ಧಿ ಕಾರ್ಯಾಗಾರದ ಸಂಯೋಜಕ ಡಾ.ಬೊಮ್ಮೇಗೌಡ ಉಪಸ್ಥಿತರಿದ್ದರು.
ನಿಟ್ಟೆ ಇಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದ ಸಹಪ್ರಾಧ್ಯಾಪಕ ಡಾ.ದುರ್ಗಾಪ್ರಸಾದ್ ಸ್ವಾಗತಿಸಿದರು. ವಿಭಾಗದ ಮುಖ್ಯಸ್ಥ ಡಾ.ಕೆ.ವಿ.ಎಸ್.ಎಸ್.ಎಸ್.ಎಸ್ ಸಾಯಿರಾಮ್ ಕಾರ್ಯಕ್ರಮದ ಪ್ರಾಮುಖ್ಯತೆಯನ್ನು ವಿವರಿಸಿದರು. ಕಾರ್ಯಾಗಾರದ ಸಂಯೋಜಕ ಡಾ.ಶಿವಪ್ರಕಾಶ ಕೆ.ಎಸ್ ವಂದಿಸಿದರು. ಸಹಪ್ರಾಧ್ಯಾಪಕಿ ಡಾ. ವಿದ್ಯಾ ಕುಡುವ ಕಾರ್ಯಕ್ರಮ ನಿರೂಪಿಸಿದರು.