ಕ್ರಿಕೆಟ್ ಕ್ರೀಡೆಯಲ್ಲಿ, ಬೌಲರ್ ಬೌಲ್ ಮಾಡುವ ಅಂತಿಮ ಹಂತದಲ್ಲಿದ್ದಾಗ ನಾನ್-ಸ್ಟ್ರೈಕಿಂಗ್ ಬ್ಯಾಟ್ಸ್ಮನ್ ಕ್ರೀಸ್ ತೊರೆದು ಬ್ಯಾಕ್ ಅಪ್ ಮಾಡಿದಲ್ಲಿ ಬೌಲರ್ ಅವರನ್ನು ರನ್ ಔಟ್ ಮಾಡುವ ಪ್ರಕ್ರಿಯೆಯನ್ನು ಮಾಂಕಡಿಂಗ್ ಎನ್ನುತ್ತಾರೆ. 1948 ರ ಸಿಡ್ನಿ ಟೆಸ್ಟ್ನಲ್ಲಿ ಇದೇ ರೀತಿ ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಬಿಲ್ ಬ್ರೌನ್ ಅವರನ್ನು ರನೌಟ್ ಮಾಡಿದ ಭಾರತೀಯ ಬೌಲರ್ ವಿನೂ ಮಾಂಕಡ್ ಅವರ ತಂತ್ರವನ್ನು ಕ್ರಿಕೆಟ್ ಜಗತ್ತಿನಲ್ಲಿ ಅವರದೇ ಹೆಸರಿನಿಂದ ಗುರುತಿಸಲಾಗುವುದು ಭಾರತೀಯರಿಗೆ ಹೆಮ್ಮೆ. ಒಬ್ಬ ಭಾರತೀಯ ಕ್ರಿಕೆಟಿಗನ ಇದೇ ತಂತ್ರವನ್ನು ಬಳಸಿ ಇನ್ನೊಬ್ಬಾಕೆ ಭಾರತೀಯ ಕ್ರಿಕೆಟ್ ಆಟಗಾರ್ತಿ ಬ್ರಿಟಿಷರ ಕ್ರಿಕೆಟ್ ತಂಡದ ಜೊತೆಗೆ ಇಡೀ ವಿಶ್ವವನ್ನೇ ಬೆಕ್ಕಸ ಬೆರಗಾಗಿಸಿ ಭಾರತೀಯರೆಲ್ಲಾ ಹೆಮ್ಮೆ ಪಡುವಂತೆ ಮಾಡಿದ್ದಾರೆ.
ಬ್ರಿಟನ್ ಮತ್ತು ಭಾರತದ ಮಧ್ಯದ ಏಕದಿನ ಪಂದ್ಯದಲ್ಲಿ ಭಾರತೀಯ ಬೌಲರ್ ದೀಪ್ತಿ ಶರ್ಮಾ ಇಂಗ್ಲೆಂಡ್ನ ನಾನ್-ಸ್ಟ್ರೈಕರ್ ಚಾರ್ಲಿ ಡೀನ್ ಅವರನ್ನು “ರನ್ ಔಟ್” ಮಾಡಿ 16 ರನ್ಗಳ ರೋಚಕ ಗೆಲುವು ಸಾಧಿಸುವಲ್ಲಿ ನೆರವಾಗಿದ್ದಲ್ಲದೆ, ಭಾರತವು ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ 3-0 ಸರಣಿ ಗೆಲುವನ್ನು ಖಾತ್ರಿಪಡಿಸುವಲ್ಲಿ ಸಹಕರಿಸಿದ್ದಾರೆ.
Here's what transpired #INDvsENG #JhulanGoswami pic.twitter.com/PtYymkvr29
— 𝗔𝗱𝗶𝘁𝘆𝗔 (@StarkAditya_) September 24, 2022
ದೀಪ್ತಿ ಶರ್ಮಾ ತನ್ನ ಎಂಟನೇ ಓವರ್ನ (ತಂಡದ 44 ನೇ) ನಾಲ್ಕನೇ ಎಸೆತವನ್ನು ಬೌಲ್ ಮಾಡಲು ಓಡುತ್ತಿರುವಾಗ, ಇಂಗ್ಲೆಂಡಿನ ಚಾರ್ಲಿ ಡೀನ್ ನಾನ್-ಸ್ಟ್ರೈಕರ್ಗಳ ತುದಿಯಲ್ಲಿ ತುಂಬಾ ಬ್ಯಾಕ್ಅಪ್ (ಕ್ರೀಸ್ ಬಿಟ್ಟು ದೂರ ಸರಿಯುವುದು) ಮಾಡುವುದನ್ನು ಗಮನಿಸಿದ್ದಾರೆ ಮತ್ತು ಇದೇ ಅವಕಾಶವನ್ನು ಉಪಯೋಗಿಸಿ ಆಕೆಯನ್ನು ರನ್ ಔಟ್ ಮಾಡಿ ಲಾರ್ಡ್ಸ್ನಲ್ಲಿ ಅಂತಿಮ ವಿಕೆಟ್ ಪಡೆದಿದ್ದಾರೆ. ದೀಪ್ತಿಯ ಈ ನಡೆಗೆ ಇಂಗ್ಲೆಂಡ್ ತಂಡದವರಿಂದ ಟೀಕೆ ವ್ಯಕ್ತವಾಗಿದ್ದರೆ, ಭಾರತೀಯರೆಲ್ಲಾ ಕುಣಿದು ಕುಪ್ಪಳಿಸಿದ್ದಾರೆ.
200 ವರ್ಷಗಳವರೆಗೆ ಭಾರತದ ಮೇಲೆ ದಬ್ಬಾಳಿಕೆ ಮಾಡಿದ ಬ್ರಿಟಿಷರಿಗೆ ನೈತಿಕತೆಯ ಬಗ್ಗೆ ಮಾತನಾಡುವ ಹಕ್ಕಿಲ್ಲ. ಅವರು ಏನು ಮಾಡಿದ್ದರೋ ಅದನ್ನೇ ಉಣ್ಣುತ್ತಿದ್ದಾರೆ ಎನ್ನುತ್ತಿರುವ ನೆಟ್ಟಿಗರು ಭಾರತೀಯ ಕ್ರಿಕೆಟ್ ಆಟಗಾರ್ತಿಯನ್ನು ಸಮರ್ಥಿಸಿದ್ದಾರೆ. ಕ್ರಿಕೆಟ್ ಜಗತ್ತಿನ ದಿಗ್ಗಜರೂ ಕೂಡಾ ದೀಪ್ತಿ ಯಾವುದೇ ಕಾನೂನು ಮುರಿದಿಲ್ಲ, ಆಕೆ ನಿಯಮಾನುಸಾರ ಆಡಿದ್ದಾರೆ ಎಂದಿದ್ದಾರೆ.
ಐಸಿಸಿ ಇತ್ತೀಚೆಗೆ ಈ ನಿಯಮಕ್ಕೆ ಕೆಲವು ಬದಲಾವಣೆಗಳನ್ನು ಮಾಡಿದೆ. ಹೊಸ ಆಟದ ಷರತ್ತುಗಳ ಪಟ್ಟಿಯಲ್ಲಿ ‘ರನ್ ಔಟ್’ ವಿಭಾಗ (ಕಾನೂನು 38) ಅಡಿಯಲ್ಲಿ ನಾನ್-ಸ್ಟ್ರೈಕರ್ನ ಕೊನೆಯಲ್ಲಿ ಬೌಲರ್ ರನ್ ಔಟ್ ಮಾಡಲು ಪ್ರಯತ್ನಿಸುವ ಕ್ರಿಯೆ ಎಂದು ಪಟ್ಟಿ ಮಾಡಲಾಗಿದೆ. ಹಿಂದೆ, ಇದನ್ನು ‘ಅನ್ಫೇರ್ ಪ್ಲೇ’ (ಕಾನೂನು 41) ಅಡಿಯಲ್ಲಿ ಪಟ್ಟಿ ಮಾಡಲಾಗಿತ್ತು. ಆದ್ದರಿಂದ, ದೀಪ್ತಿ ಅವರು ಶನಿವಾರ ಚಾರ್ಲಿ ಡೀನ್ ಅವರನ್ನು ರನ್ ಔಟ್ ಮಾಡಿದಾಗ ನಿಯಮಗಳೊಳಗೆ ಇದ್ದರು ಎಂದು ಕ್ರಿಕೆಟ್ ತಜ್ಞರು ಸಮರ್ಥಿಸಿದ್ದಾರೆ.