ಹಿರಿಯಡಕ: ಉಡುಪಿ ತಾಲೂಕಿನ ಹಿರಿಯಡಕ- ಗುಡ್ಡೆಯಂಗಡಿ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಈ ದಾರಿಯಲ್ಲಿ ಸಾಗುವಾಗ ಯಮಕೂಪದ ದರ್ಶನವಾಗುತ್ತಿದ್ದು, ವಾಹನ ಸವಾರರು ಜೀವವನ್ನು ಅಂಗೈಯಲ್ಲಿಟ್ಟು ಪ್ರಯಾಣಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಹಿರಿಯಡಕದಿಂದ ಗುಡ್ಡೆಯಂಗಡಿ ಸಂಪರ್ಕಿಸುವ ರಸ್ತೆಯಲ್ಲಿ ಐದಾರು ಕಿಲೋಮೀಟರ್ ವರೆಗೆ ಗುಂಡಿಗಳು ಬಾಯ್ತೆರೆದುಕೊಂಡಿದ್ದು, ಅಪಾಯಕ್ಕೆ ಆಹ್ವಾನಿಸುವಂತಿದೆ. ಹಿರಿಯಡಕ ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ನಿಂದ ಆರಂಭಗೊಂಡು ಗುಡ್ಡೆಯಂಗಡಿವರೆಗೆ ರಸ್ತೆಯು ತೀರ ದುಃಸ್ಥಿತಿಯಲ್ಲಿದ್ದು, ವಾಹನಗಳ ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿದೆ.
ಈ ದಾರಿಯಲ್ಲಿ ನಿತ್ಯ ಪ್ರಯಾಣಿಸುವ ವಾಹನ ಸವಾರರು ಮತ್ತು ಸಾರ್ವಜನಿಕರು ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ರಸ್ತೆಯ ಅಪಾಯಕಾರಿ ಹೊಂಡ ಗುಂಡಿಗಳನ್ನು ಶೀಘ್ರವೇ ದುರಸ್ತಿ ಮಾಡದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.