ಕೊಡವೂರು: ಕೇಂದ್ರದ ಅನುದಾನದಲ್ಲಿ ನಿರ್ಮಾಣವಾದ ಮನೆ ಹಸ್ತಾಂತರ

ಕೊಡವೂರು: ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ದಿನ ಕೇಂದ್ರ ಸರ್ಕಾರದ ಅನುದಾನದಲ್ಲಿ ವಸತಿ ನಿರ್ಮಾಣವಾಗಿದ್ದು, ಇದರ ಗೃಹಪ್ರವೇಶ ಕೊಡವೂರಿನಲ್ಲಿ ನಡೆಯಿತು.

2 ವರ್ಷಗಳ ಹಿಂದೆ ನೆರೆಯಲ್ಲಿ ಮನೆ ಕಳೆದು ಕೊಂಡವರಿಗೆ ಕೇಂದ್ರದ ಅನುದಾನದಲ್ಲಿ ಮನೆಯನ್ನು ನಿರ್ಮಾಣ ಮಾಡಲಾಗಿದ್ದು, ಹೀಗೆ ಕೇಂದ್ರದ ಎಲ್ಲಾ ಅನುದಾನವನ್ನು ಬಳಸಿಕೊಂಡು ಪ್ರತಿಮನೆಗೆ ತಲುಪಿಸುವ ವ್ಯವಸ್ಥೆ ಕೊಡವೂರು ವಾರ್ಡಿನಲ್ಲಿ ಮಾಡಲಾಗಿದ್ದು ಮಂಗಳವಾರ ಕೊಡವೂರಿನ ವಿವೇಕಾನಂದ ಮಾರ್ಗ ಅತ್ತಲಾಡಿ ಪರಿಸರದ ತೋಮ ಪೂಜಾರಿ ಇವರ ಮನೆಯ ಗೃಹಪ್ರವೇಶವನ್ನು ಮಾಡಿ ಅವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮನೆ ನಿರ್ಮಾಣಕ್ಕೆ ಸಹಕರಿಸಿ 13 ಮನೆಗಳಿಗೆ ಅನುದಾನ ದೊರಕಿಸಿಕೊಟ್ಟ ಗ್ರಾಮ ಲೆಕ್ಕಾಧಿಕಾರಿ ಕೆ ಕಾರ್ತಿಕೇಯ ಭಟ್ ಇವರಿಗೆ ಕೊಡವೂರಿನ ನಾಗರಿಕರ ಪರವಾಗಿ ಗೌರವಿಸಲಾಯಿತು.

ಗ್ರಾಮ ಲೆಕ್ಕಾಧಿಕಾರಿಯಾಗಿದ್ದ ಕಾರ್ತಿಕೇಯ ಭಟ್ ವಾರ್ಡಿನಲ್ಲಿ ಅನೇಕ ಒಳ್ಳೆಯ ಕಾರ್ಯಗಳನ್ನು ಕೈಗೊಂಡಿದ್ದು, ಸಂಘ ಸಂಸ್ಥೆಗಳ ಸಹಕಾರದಿಂದ ನಗರಸಭೆಯ ಸವಲತ್ತುಗಳನ್ನು ಖುದ್ದು ಮನೆ ಮನೆಗೆ ತಲುಪಿಸುವ ಕಾರ್ಯ ಮಾಡಿರುತ್ತಾರೆ. ಅಧಿಕಾರಿಗಳ ಉತ್ತಮ ಕೆಲಸಗಳನ್ನು ಗುರುತಿಸಿ ಗೌರವಿಸುವ ಕಾರ್ಯ ನಮ್ಮದು. ಈ ರೀತಿ ಉತ್ತಮವಾಗಿ ಕೆಲಸ ಮಾಡುವ ಅಧಿಕಾರಿಗಳಿಗೆ ಗೌರವಿಸುವ ಕಾರ್ಯ ಮಾಡಿದ್ದಲ್ಲಿ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ಗ್ರಾಮದ ಅಭಿವೃದ್ಧಿಗೆ ತರಲು ಸಾಧ್ಯವಿದೆ. ಇನ್ನು ಮುಂದೆ ಬರುವ ಅಧಿಕಾರಿಗಳು ಕೂಡಾ ಇಂತಹ ಕೆಲಸಗಳನ್ನು ಮಾಡಬೇಕು ಎಂದು ನಗರಸಭಾ ಸದಸ್ಯ ವಿಜಯ್ ಕೊಡವೂರು ತಿಳಿಸಿದರು.

ಈ ಸಂದರ್ಭದಲ್ಲಿ ಹಿರಿಯರಾದ ಸಿ. ಎ ಬ್ಯಾಂಕ್ ಅಧ್ಯಕ್ಷ ನಾರಾಯಣ ಬಲ್ಲಾಳ್, ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ಅಧ್ಯಕ್ಷ ಅಶೋಕ್ ಶೆಟ್ಟಿಗಾರ್, ಮಹಾ ಗಣಪತಿ ಫೈಟಿಂಗ್ ಮಾಲಕಸುರೇಶ್ ಶೇರಿಗಾರ್, ಸದಾನಂದ ಶೇರಿಗಾರ್, ವಿನಯ್ ಮತ್ತಿತರರು ಹಾಜರಿದ್ದರು.