ನಮೀಬಿಯಾದಿಂದ ಸ್ಥಳಾಂತರಗೊಳಿಸಲಾದ 8 ಚಿರತೆಗಳನ್ನು ಶನಿವಾರದಂದು ಪ್ರಧಾನಿ ಮೋದಿ, ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆಗೊಳಿಸಿದರು. ಆ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿ, ಪ್ರಕೃತಿ ಮತ್ತು ಪರಿಸರವನ್ನು ರಕ್ಷಿಸಿದಾಗ ನಮ್ಮ ಭವಿಷ್ಯವೂ ಸುಭದ್ರವಾಗುತ್ತದೆ. ಬೆಳವಣಿಗೆ ಮತ್ತು ಸಮೃದ್ಧಿಯ ಮಾರ್ಗಗಳು ಸಹ ತೆರೆದುಕೊಳ್ಳುತ್ತವೆ. ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳು ಮತ್ತೆ ಓಡಾಡುವಾಗ ಹುಲ್ಲುಗಾವಲು ಪರಿಸರ ವ್ಯವಸ್ಥೆ ಮತ್ತೆ ಪುನಃಸ್ಥಾಪಿತವಾಗುತ್ತದೆ. ಜೈವಿಕ ವೈವಿಧ್ಯತೆ ಮತ್ತಷ್ಟು ಹೆಚ್ಚಾಗುತ್ತದೆ. ಮುಂದಿನ ದಿನಗಳಲ್ಲಿ ಇಲ್ಲಿ ಪರಿಸರ ಪ್ರವಾಸೋದ್ಯಮವೂ ಹೆಚ್ಚಾಗಲಿದೆ, ಇಲ್ಲಿ ಅಭಿವೃದ್ಧಿಯ ಹೊಸ ಸಾಧ್ಯತೆಗಳು ಹುಟ್ಟಿಕೊಳ್ಳುತ್ತವೆ, ಉದ್ಯೋಗಾವಕಾಶಗಳು ಹೆಚ್ಚಲಿವೆ ಎಂದು ಹೇಳಿದರು.
Cheetah is back…
The world's fastest land animal, the Cheetah, is in India now.The Hon'ble PM Shri Narendra Modi Ji released 8 Cheetas in the Kuno National Park, Madhya Pradesh, brought from Namibia. The Cheetas are brought under the Cheeta Reintroduction Project of @moefcc. pic.twitter.com/c0o3JwlHzf
— MyGov Arunachal Pradesh (@MyGovArunachal) September 17, 2022
ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆಯಾದ ಚಿರತೆಗಳನ್ನು ನೋಡಲು ದೇಶವಾಸಿಗಳು ತಾಳ್ಮೆ ತೋರಿಸಬೇಕು, ಕೆಲವು ತಿಂಗಳು ಕಾಯಬೇಕು. ಇಂದು ಈ ಚಿರತೆಗಳು ಈ ಪ್ರದೇಶದ ಅರಿವಿಲ್ಲದೆ ಅತಿಥಿಗಳಾಗಿ ಬಂದಿವೆ. ಈ ಚಿರತೆಗಳು ಕುನೋ ರಾಷ್ಟ್ರೀಯ ಉದ್ಯಾನವನವನ್ನು ತಮ್ಮ ಮನೆಯನ್ನಾಗಿ ಮಾಡಿಕೊಳ್ಳಲು, ನಾವು ಈ ಚಿರತೆಗಳಿಗೆ ಕೆಲವು ತಿಂಗಳುಗಳ ಸಮಯವನ್ನು ನೀಡಬೇಕಾಗಿದೆ. ಅಂತರಾಷ್ಟ್ರೀಯ ಮಾರ್ಗಸೂಚಿಗಳನ್ನು ಅನುಸರಿಸಿ, ಭಾರತವು ಈ ಚಿರತೆಗಳನ್ನು ನೆಲೆಗೊಳಿಸಲು ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದೆ. ನಮ್ಮ ಪ್ರಯತ್ನಗಳು ವಿಫಲವಾಗಲು ನಾವು ಬಿಡಬಾರದು ಎಂದರು.
ಸರಕಾರದ ಸರಿಯಾದ ನಿರ್ಧಾರ ಮತ್ತು ಪ್ರಯತ್ನಗಳ ಫಲವಾಗಿ ಇಂದು ದೇಶದಲ್ಲಿ ಏಷಿಯಾದ ಹುಲಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಅಸ್ಸಾಮಿನಲ್ಲಿ ಒಂದು ಕಾಲದಲ್ಲಿ ಏಕಶೃಂಗಿ ಘೇಂಡಾ ಮೃಗಗಳು ಅಳಿವಿನ ಅಂಚಿನಲ್ಲಿದ್ದವು. ಆದರೆ ಈಗ ಅವುಗಳ ಸಂಖ್ಯೆಯಲ್ಲಿಯೂ ವೃದ್ದಿಯಾಗಿದೆ. ದೇಶದಲ್ಲಿ 30 ಸಾವಿರಕ್ಕೂ ಮಿಕ್ಕಿ ಆನೆಗಳಿವೆ. ಭಾರತದ ಜೌಗು ಪ್ರದೇಶಗಳ ವಿಸ್ತಾರದಲ್ಲಿಯೂ ಏರಿಕೆ ಕಂಡು ಬಂದಿದೆ. 2014 ರ ಬಳಿಕ ಸುಮಾರು 250 ಹೊಸ ಸಂರಕ್ಷಿತ ಪ್ರದೇಶಗಳನ್ನು ಸೇರಿಸಲಾಗಿದೆ ಎಂದು ಅವರು ಹೇಳಿದರು.
ಇಂದು, 21 ನೇ ಶತಮಾನದ ಭಾರತವು ಇಡೀ ಜಗತ್ತಿಗೆ ಆರ್ಥಿಕತೆ ಮತ್ತು ಪರಿಸರ ವಿಜ್ಞಾನವು ಸಂಘರ್ಷದ ಕ್ಷೇತ್ರಗಳಲ್ಲ ಎಂಬ ಸಂದೇಶವನ್ನು ನೀಡುತ್ತಿದೆ. ಪರಿಸರ ರಕ್ಷಣೆಯ ಜೊತೆಗೆ ದೇಶದ ಪ್ರಗತಿಯೂ ಆಗಬಹುದು, ಇದನ್ನು ಭಾರತ ಜಗತ್ತಿಗೆ ತೋರಿಸಿದೆ. ಒಂದು ಕಡೆ, ನಾವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಸೇರಿದ್ದೇವೆ, ಅದೇ ಸಮಯದಲ್ಲಿ ದೇಶದ ಅರಣ್ಯ ಪ್ರದೇಶಗಳು ಸಹ ವೇಗವಾಗಿ ವಿಸ್ತರಿಸುತ್ತಿವೆ. ದೇಶದ 75 ಜೌಗು ಪ್ರದೇಶಗಳನ್ನು ರಾಮ್ಸಾರ್ ಸೈಟ್ಗಳೆಂದು ಘೋಷಿಸಲಾಗಿದೆ, ಅದರಲ್ಲಿ 26 ಸೈಟ್ಗಳನ್ನು ಕಳೆದ 4 ವರ್ಷಗಳಲ್ಲಿ ಸೇರಿಸಲಾಗಿದೆ. ದೇಶದ ಈ ಪ್ರಯತ್ನಗಳ ಪರಿಣಾಮವು ಮುಂದಿನ ಶತಮಾನಗಳವರೆಗೆ ಗೋಚರಿಸುತ್ತದೆ ಮತ್ತು ಪ್ರಗತಿಗೆ ಹೊಸ ಹಾದಿಗಳನ್ನು ಸುಗಮಗೊಳಿಸುತ್ತದೆ ಎಂದು ಅವರು ಹೇಳಿದರು.