ನವದೆಹಲಿ: ದೇಶದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಅವರಿಗೆ ದೊರೆತ ಸ್ಮರಣಿಕೆಗಳು ಮತ್ತು ಉಡುಗೊರೆಗಳ ಇ-ಹರಾಜು ಪ್ರಕ್ರಿಯೆ ಶನಿವಾರದಂದು ಆರಂಭವಾಗಿದೆ. ಕೇಂದ್ರ ಸಂಸ್ಕೃತಿ ಸಚಿವಾಲಯವು ಈ ಹರಾಜು ಪ್ರಕ್ರಿಯೆಯನ್ನು ನಡೆಸುತ್ತಿದೆ. ಇದು ಹಾರಾಜು ಪ್ರಕ್ರಿಯೆಯ ನಾಲ್ಕನೇ ಆವೃತ್ತಿಯಾಗಿದ್ದು, ಅಕ್ಟೋಬರ್ 2 ರವರೆಗೆ ಇ-ಹರಾಜು ಪ್ರಕ್ರಿಯೆ ಮುಂದುವರಿಯಲಿದೆ.
ಶನಿವಾರ ಬೆಳಿಗ್ಗೆ 10 ಗಂಟೆಗೆ ಇ-ಹರಾಜು ಪ್ರಾರಂಭವಾಗಿದ್ದು, https://pmmementos.gov.in ನಲ್ಲಿ ನೋಂದಣಿ ಮಾಡುವ ಮೂಲಕ ಭಾಗವಹಿಸಿ ಪ್ರಧಾನಿ ಮೋದಿಯವರಿಗೆ ದೊರೆತ ಪಟ್ಟಿಮಾಡಲಾದ ವಿಶೇಷ ಉಡುಗೊರೆಗಳ ಹರಾಜಿನಲ್ಲಿ ಭಾಗವಹಿಸಬಹುದು ಎಂದು ಸಚಿವ ಕಿಶನ್ ರೆಡ್ಡಿ ಟ್ವೀಟ್ ಮಾಡಿ ತಿಳಿಸಿದ್ದಾರೆ.
ದೆಹಲಿಯ ನ್ಯಾಶನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ನಲ್ಲಿ ಈ ವಿಶೇಷ ಉಡುಗೊರೆ ಮತ್ತು ಸ್ಮರಣಿಕೆಗಳನ್ನು ಪ್ರದರ್ಶನಕ್ಕಿಡಲಾಗಿದ್ದು, 1200 ಕ್ಕೂ ಮಿಕ್ಕಿದ ಉಡುಗೊರೆ ಮತ್ತು ಸ್ಮರಣಿಕೆಗಳಿವೆ. ವಿವಿಧ ರೀತಿಯ ಕಲಾಕೃತಿಗಳು, ಚಿತ್ರಕಲೆ, ಕರಕುಶಲ ವಸ್ತುಗಳು, ಮೂರ್ತಿ, ಅಂಗವಸ್ತ್ರ, ಶಾಲು, ಅಯೋಧ್ಯೆ-ಕಾಶಿ-ವಾರಾಣಾಸಿ ಮಂದಿರದ ಪ್ರತಿಕೃತಿಗಳು ಮುಂತಾದುವುಗಳನ್ನು ಹರಾಜಿಗೆ ಇಡಲಾಗಿದೆ.
ತನಗೆ ದೊರೆತ ಸ್ಮರಣಿಕೆ ಮತ್ತು ಉಡುಗೊರೆಗಳನ್ನು ಹರಾಜು ಮಾಡಿದ ಮೊಟ್ಟಮೊದಲ ಪ್ರಧಾನಮಂತ್ರಿ ನರೇಂದ್ರ ಮೋದಿ. ಇ-ಹರಾಜಿನಿಂದ ದೊರೆತ ನಿಧಿಯನ್ನು ದೇಶದ ಜೀವ ನದಿಯನ್ನು ಸಂರಕ್ಷಿಸಿ ಪುನರುಜ್ಜೀವನಗೊಳಿಸುವ ‘ನಮಾಮಿ ಗಂಗೆ’ ಯೋಜನೆಯಂತಹ ಒಂದು ಉತ್ತಮವಾದ ಕಾರ್ಯಕ್ಕೆ ಬಳಸಲಾಗುತ್ತದೆ ಎಂದು ಸಚಿವ ಕಿಶನ್ ರೆಡ್ಡಿ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎ.ಎನ್.ಐ ವರದಿ ಮಾಡಿದೆ.
ಸ್ಮರಣಿಕೆಗಳ ಪ್ರದರ್ಶನವು ಸಾರ್ವಜನಿಕರಿಗೆ ಉಚಿತ ಪ್ರವೇಶವನ್ನು ಹೊಂದಿದೆ. ಈ ಉಡುಗೊರೆ ಮತ್ತು ಸ್ಮರಿಣಿಕೆಗಳನ್ನು ಸಚಿವಾಲಯದ ವೆಬ್ ಸೈಟ್ ನಲ್ಲಿಯೂ ವೀಕ್ಷಿಸಬಹುದಾಗಿದೆ.












