ಮಣಿಪಾಲ: ನಾವು ಜೀವಿಸುತ್ತಿರುವ ನೈಜ ಪ್ರಪಂಚ ನೈತಿಕ ಮತ್ತು ಆದರ್ಶದ ಜಗತ್ತಲ್ಲ, ಆದರೆ ಶಾಂತಿಪ್ರಿಯ ನಾಗರಿಕರಾದ ನಾವು ಶಾಂತಿ ಸ್ಥಾಪನೆಗಾಗಿ ಸಾಮೂಹಿಕ ಪ್ರಯತ್ನ ಮಾಡಲೇಬೇಕು ಎಂದು ಯುನೆಸ್ಕೋ ಶಾಂತಿ ಪೀಠದ ಮುಖ್ಯಸ್ಥ ಪ್ರೊ.ಎಂ.ಡಿ.ನಲಪತ್ ಹೇಳಿದರು.
ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಸಂಪನ್ಮೂಲಗಳ ಮೇಲಿನ ಪ್ರಾಬಲ್ಯ ಮತ್ತು ನಿಯಂತ್ರಣ ಸಾಧಿಸುವ ಪ್ರಯತ್ನಗಳೇ ಈ ಹಿಂದೆ ಯುದ್ಧಗಳಿಗೆ ಕಾರಣವಾಗಿದೆ ಮತ್ತು ನೈಜ ಜಗತ್ತು ನೈತಿಕ ಜಗತ್ತಲ್ಲ ಆದರೆ ನಾವು ಶಾಂತಿಗಾಗಿ ಶ್ರಮಿಸಬೇಕು ಎಂದರು.
ಅಂತರಾಷ್ಟ್ರೀಯ ಶಾಂತಿಯ ಹೊರತಾಗಿ, ಶಾಂತಿಯ ಕಲ್ಪನೆಯು ಲಿಂಗ, ಪರಿಸರ, ಸಾಮಾಜಿಕ ನ್ಯಾಯ ಮತ್ತಿನ್ನಿತರ ಕಲ್ಪನೆಯನ್ನು ಒಳಗೊಂಡಿದೆ. ಅಂತರಾಷ್ಟ್ರೀಯ ಸಂಬಂಧಗಳಲ್ಲಿ ಬಲಾಢ್ಯ ರಾಷ್ಟ್ರವಾಗಿ ಭಾರತ ಭಾಗವಹಿಸಬೇಕು ಎಂದು ಅವರು ಪ್ರತಿಪಾದಿಸಿದರು.
ಭಾರತದಲ್ಲಿ, ಧಾರ್ಮಿಕ ಸಹಬಾಳ್ವೆಯ ಅವಶ್ಯಕತೆಯಿದೆ ಮತ್ತು ಈ ಕಲ್ಪನೆಯು ಯಾವುದೇ ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದ್ದಲ್ಲ. ಎಲ್ಲ ಧರ್ಮಗಳ ಸಾರವೇ ಶಾಂತಿ ಎನ್ನುತ್ತಾ ಭಾರತದ ವಿಭಜನೆ ಸೇರಿದಂತೆ ಗತಕಾಲದ ಹಲವು ನಿರರ್ಥಕ ಸಂಘರ್ಷಗಳ ಉದಾಹರಣೆಗಳನ್ನು ನೀಡಿದರು. ಜಿಸಿಪಿಎಎಸ್ನ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಸಂವಾದವನ್ನು ನಡೆಸಿಕೊಟ್ಟರು.