ಕ್ವಾಂಟಾಸ್‌ ನ ಸಿಡ್ನಿ – ಬೆಂಗಳೂರು ಉದ್ಘಾಟನಾ ವಿಮಾನದ ಮೆನುವಿನಲ್ಲಿ ತುಳುನಾಡಿನ ಕೋರಿ ಗಸಿ!

ಉಡುಪಿ: ಆಸ್ಟ್ರೇಲಿಯಾ ಮೂಲದ ಕ್ವಾಂಟಾಸ್ ಏರ್‌ವೇಸ್ ಸೆಪ್ಟೆಂಬರ್ 14 ರಂದು ಬೆಂಗಳೂರಿನಿಂದ ಸಿಡ್ನಿಗೆ ಹೊಸ ವಿಮಾನವನ್ನು ಪ್ರಾರಂಭಿಸಿದೆ. ನಿನ್ನೆ ಸಂಜೆ 6.35ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಟೇಕಾಫ್ ಆಗಿದ್ದು, ದಕ್ಷಿಣ ಭಾರತದಿಂದ ಆಸ್ಟ್ರೇಲಿಯಾಕ್ಕೆ ನೇರವಾಗಿ ಸಂಪರ್ಕ ಕಲ್ಪಿಸುವ ಮೊದಲ ವಿಮಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ನೇರ ವಿಮಾನವು ಬೆಂಗಳೂರಿನಿಂದ ಸಿಡ್ನಿಗೆ ತಲುಪಲು 11 ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ. ಸಿಡ್ನಿಯಿಂದ ಹಿಂತಿರುಗುವ ವಿಮಾನ ಬುಧವಾರ ಸಂಜೆ 4.55ಕ್ಕೆ ಬೆಂಗಳೂರಿಗೆ ಬಂದಿಳಿಯಲಿದೆ.ಕ್ವಾಂಟಾಸ್ ಬೆಂಗಳೂರು-ಸಿಡ್ನಿಗೆ ಎ330 ವಿಮಾನವನ್ನು ಹಾರಿಸಲಿದೆ ಮತ್ತು ಬುಧವಾರ, ಶುಕ್ರವಾರ, ಶನಿವಾರ ಹಾಗೂ ಭಾನುವಾರದಂದು ವಾರಕ್ಕೆ ನಾಲ್ಕು ಬಾರಿ ಹಿಂದಿರುಗಲಿದೆ. ಕ್ವಾಂಟಾಸ್ ಇಂಡಿಗೋ ಜೊತೆ ಕೋಡ್ ಹಂಚಿಕೆ ಒಪ್ಪಂದವನ್ನು ಹೊಂದಿದೆ. ಈ ನೇರ ವಿಮಾನದಿಂದಾಗಿ 3 ಗಂಟೆಗಳು ಉಳಿತಾಯವಾಗಲಿದೆ. ಇದು ಐತಿಹಾಸಿಕ ಸಂದರ್ಭವಾಗಿದ್ದು, ಇದು ದಕ್ಷಿಣ ಮತ್ತು ಮಧ್ಯ ಭಾರತವನ್ನು ಆಸ್ಟ್ರೇಲಿಯಾಕ್ಕೆ ಸಂಪರ್ಕಿಸುವ ಮೊದಲ ತಡೆರಹಿತ ಸೇವೆಯಾಗಿದೆ.

ತುಳುನಾಡಿನ ಕೋರಿ ಗಸಿಯನ್ನು ಕ್ವಾಂಟಾಸ್‌ ನ ಸಿಡ್ನಿ – ಬೆಂಗಳೂರು ಉದ್ಘಾಟನಾ ವಿಮಾನದ ಆಹಾರದ ಮೆನುವಿನಲ್ಲಿ ನೀಡಲಾಗಿರುವುದನ್ನು ಬಳಕೆದಾರರೊಬ್ಬರು ಹಂಚಿಕೊಡಿರುವುದನ್ನು ವಿಸಿಟ್ ಉಡುಪಿ ಎನ್ನುವ ಟ್ವಿಟ್ಟರ್ ಪೇಜ್ ಹಂಚಿಕೊಂಡಿದೆ. ತುಳುನಾಡಿನ ಜನರ ಮನಮೆಚ್ಚಿನ ಕೋರಿ ಗಸಿ ವಿದೇಶ ಪ್ರಯಾಣದ ವಿಮಾನದಲ್ಲಿ ಜಾಗ ಪಡೆದುಕೊಂಡಿರುವುದು ತುಳುವರಿಗೆ ಸಂತೋಷ ತಂದಿದೆ.

ಚಿತ್ರ ಕೃಪೆ: ವಿಸಿಟ್ ಉಡುಪಿ ಟ್ವಿಟರ್ ಪೇಜ್