ದೇಶದ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ಸಮಸ್ತ ಇಂಜಿನಿಯರ್ ಗಳಿಗೆ ಇಂಜಿನಿಯರಿಂಗ್ ದಿನದ ಶುಭಾಶಯಗಳು

ಭೋರ್ಗರೆಯುತ್ತಾ ಧುಮ್ಮಿಕ್ಕುವ ಜೋಗದ ಜಲಪಾತವನ್ನು ಕಂಡು ಒಬ್ಬ ಭಾವಾತುರನಾಗಿ ಕಾವ್ಯ ರಚಿಸಿ ಧನ್ಯನಾಗುತ್ತಾನೆ. ಅದೆ ಮತ್ತೊಬ್ಬ ಇಷ್ಟೊಂದು ನೀರು ಪೋಲಾಗುತ್ತಿದೆಯಲ್ಲಾ? ಇದಕ್ಕೆ ಅಣೆಕಟ್ಟು ಕಟ್ಟಿ ವಿದ್ಯುತ್ ಉತ್ಪಾದಿಸಬಹುದಲ್ಲಾ ಅಥವಾ ನೀರಾವರಿಗೆ ಬಳಸಬಹುದಲ್ಲಾ ಎಂದು ಯೋಚಿಸುತ್ತಾನೆ. ಒಬ್ಬ ಕವಿಗೂ ಒಬ್ಬ ವಿಜ್ಞಾನಿಗೂ ಇರುವ ವ್ಯತ್ಯಾಸವೆಂದರೆ ಇದುವೆ. ಇಬ್ಬರೂ ಅವರವರ ಕ್ಷೇತ್ರದಲ್ಲಿ ಶ್ರೇಷ್ಠರು.

ಆಧುನಿಕ ಮೈಸೂರಿನ ಶಿಲ್ಪಿ ಸರ್ ಎಮ್ ವಿಶ್ವೇಶ್ವರಯ್ಯನವರ ಜನ್ಮದಿನವನ್ನು ದೇಶಾದ್ಯಂತ ಇಂಜಿನಿಯರರ ದಿನಾಚರಣೆಯಾಗಿ ಆಚರಿಸುತ್ತೇವೆ. ವಿಶ್ವೇಶ್ವರಯ್ಯನವರು ಕೇವಲ ಒಬ್ಬ ಶ್ರೇಷ್ಠ ಇಂಜಿನಿಯರ್ ಮಾತ್ರವಲ್ಲ, ಅವರು ವಿಜ್ಞಾನಿ ಕೂಡಾ. ವಿಜ್ಞಾನವೆಂದರೆ ವಿಶೇಷವಾದ ಪರಿಣಿತಿ ಹೊಂದಿದ ಜ್ಞಾನ. ವಿಶ್ವೇಶ್ವರಯ್ಯನವರ ಈ ವಿಶೇಷವಾದ ಜ್ಞಾನವೆ ಇಂದು ನಮ್ಮೆಲ್ಲರ ಮನೆಗಳನ್ನು ಬೆಳಗುತ್ತಿರುವುದು. ಅವರ ದೂರದರ್ಶಿತ್ವದ ಫಲವನ್ನು ಇಂದಿಗೂ ನಾವು ಉಣ್ಣುತ್ತಿರುವುದು.

ಭಾರತವು ಅನಾದಿ ಕಾಲದಿಂದಲೂ ನೀರಾವರಿ, ಕಟ್ಟಡ ನಿರ್ಮಾಣ, ನಗರ ಯೋಜನೆಗಳಲ್ಲಿ ಮುಂದುವರಿದಿತ್ತು. ಇದಕ್ಕೆ ಹರಪ್ಪಾ ಮತ್ತು ಮೊಹೆಂಜಾದಾರೋ ನಗರಗಳೆ ಸಾಕ್ಷಿ. ಇದಲ್ಲದೆಯೂ ಭಾರತದ ಅನೇಕ ರಾಜರುಗಳ ಕಾಲದಲ್ಲಿ ನಿರ್ಮಾಣವಾಗಿದ್ದ ಅಣೆಕಟ್ಟುಗಳ ಉಲ್ಲೇಖಗಳು, ಸಾವಿರಾರು ವರ್ಷಗಳಿಂದಲೂ ತಲೆ ಎತ್ತಿ ನಿಂತಿರುವ ಸಂಕೀರ್ಣ ಕಲಾಕೃತಿಗಳನ್ನೊಳಗೊಂಡ ದೇವಸ್ಥಾನಗಳನ್ನು ನೋಡುವಾಗಲೆಲ್ಲಾ ಮತ್ತು ರಾಮಾಯಣ ಕಾಲದಲ್ಲಿ ವಿಶ್ವಕರ್ಮರು ಲಂಕೆಯಂತಹ ಸ್ವರ್ಣ ನಗರವನ್ನು ನಿರ್ಮಾಣ ಮಾಡಿರುವ ಬಗ್ಗೆ, ನಳ-ನೀಲರು ಸಮುದ್ರಕ್ಕೆ ಸೇತುವೆಯನ್ನು ಕಟ್ಟಿದ ಬಗ್ಗೆ, ಮಯಾಸೂರರು ಇಂದ್ರಪ್ರಸ್ಥವನ್ನು ನಿರ್ಮಾಣ ಮಾಡಿರುವ ಬಗ್ಗೆ ಓದುವಾಗಲೆಲ್ಲಾ ಇಲ್ಲಿನ ಸಭ್ಯತೆಯು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅತ್ಯಂತ ಮುಂದುವರಿದಿದ್ದ ಬಗ್ಗೆ ಮಾಹಿತಿ ದೊರೆಯುತ್ತದೆ.

ಅಂದಿನ ಕಾಲದಲ್ಲಿ ವಿಶ್ವಕರ್ಮರಂತೆ ಇಂದಿನ ಕಾಲದಲ್ಲಿ ವಿಶ್ವೇಶ್ವರಯ್ಯನವರಂತಹ ಸರ್ವಶ್ರೇಷ್ಠ ಅಭಿಯಂತರರಿಂದಾಗಿ ಮೂಲಸೌಕರ್ಯದ ವಿಷಯದಲ್ಲಿ ದೇಶವು ಅತ್ಯಂತ ಮುಂದುವರಿದಿದೆ. ಹರಿಯುವ ನದಿಗೆ ಅಣೆಕಟ್ಟು ಕಟ್ಟಿ ಕಾಲುವೆಗಳ ಮೂಲಕ ಹರಿಸಿ ಮನೆಯ ನಳ್ಳಿಗಳಿಗೆ ನೀರು ಹರಿಯುವಂತೆ ಮಾಡುವಲ್ಲಿಂದ ತೊಡಗಿ, ಸಮುದ್ರದ ಮಧ್ಯೆ ಸೇತುವೆ, ಆಕಾಶದೆತ್ತರದ ಕಟ್ಟಡಗಳು, ಸುರಂಗದೊಳಗಿನ ರೈಲ್ವೆ ಮಾರ್ಗಗಳು, ನಡೆದಾಡುವ ರಸ್ತೆಗಳು, ಗುಂಡಿ ಒತ್ತಿದ ತಕ್ಷಣ ಬೆಳಗುವ ವಿದ್ಯುತ್ ದೀಪಗಳು, ನೆಲ- ಜಲದ ಆಳದಲ್ಲಿರುವ ಕೇಬಲ್ ಗಳು, ಅಂಗೈಯಲ್ಲಿ ವಿಶ್ವವನ್ನು ಕ್ಷಣಾರ್ಧಲ್ಲಿ ತೋರಿಸುವ ಅತ್ಯಾಧುನಿಕ ಸಲಕರಣೆಗಳು, ಸಾರಿಗೆ ಮತ್ತು ಸಂಚಾರ ವ್ಯವಸ್ಥೆಗಳು, ಬ್ರಹ್ಮಾಂಡದ ಆಚೆಗೆ ಪಯಣಿಸಿ ಹೊಸಹೊಸ ವಿಷಯಗಳನ್ನು ಕಲೆಹಾಕುತ್ತಿರುವ ಬಾಹ್ಯಾಕಾಶ ನೌಕೆಗಳು…. ಈ ದೇಶಕ್ಕೆ ಇಂಜಿನಿಯರ್ ಗಳು ನೀಡುವ ಕೊಡುಗೆ ಒಂದೇ ಎರಡೇ

ಇಂತಹ ಅಸಾಮಾನ್ಯ ಪ್ರತಿಭೆಗಳನ್ನು ಸರ್.ಎಂ.ವಿಶ್ವೇಶ್ವರಯ್ಯನವರಂತಹ ಅಲೌಕಿಕ ಪ್ರತಿಭೆಯ ಜನ್ಮದಿನದಂದು ಗೌರವಿಸುವ ಮೂಲಕ ಅವರಿಗೆ ನಮನವನ್ನು ಸಲ್ಲಿಸುವುದು ಯುಕ್ತವಾಗಿದೆ. ದೇಶದ ಪ್ರತಿಯೊಬ್ಬ ಇಂಜಿನಿಯರಿನ ಒಳಗೂ ಒಬ್ಬ ವಿಶ್ವೇಶ್ವರಯ್ಯನವರಿದ್ದರೆ ದೇಶವು ಅಭಿವೃದ್ದಿಯ ಪಥದಲ್ಲಿ ಮುನ್ನುಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಾರದು. ಪ್ರತಿನಿತ್ಯವೂ ಹೊಸ ಆವಿಷ್ಕಾರ, ಹೊಸ ತಂತ್ರಜ್ಞಾನಗಳೊಂದಿಗೆ ಜನರ ಜೀವನವನ್ನು ಸುಗಮ ಮತ್ತು ಸುಲಭವಾಗಿಸಲು ಶ್ರಮಿಸುತ್ತಿರುವ ಎಲ್ಲ ಇಂಜಿನಿಯರ್ ಗಳಿಗೂ ಇಂಜಿನಿಯರ್ ದಿನದ ಶುಭಾಶಯಗಳು.

ಉಡುಪಿ ಎಕ್ಸ್ ಪ್ರೆಸ್