ಉಚ್ಚಿಲ: ಬೆಳಪು ವ್ಯವಸಾಯ ಸಹಕಾರಿ ಸಂಘವು 2021-22ನೇ ಸಾಲಿನಲ್ಲಿ ಗಣನೀಯ ಅಭಿವೃದ್ಥಿ ಸಾಧಿಸಿದ್ದು, ವಾರ್ಷಿಕ ವ್ಯವಹಾರ 200 ಕೋಟಿ ದಾಟಿದ್ದು ಕಳೆದ ವರ್ಷದಿಂದ ಮೂರು ಪಟ್ಟು ವ್ಯವಹಾರವನ್ನು ವೃದ್ಧಿಸಿ ಗ್ರಾಮೀಣ ಪ್ರದೇಶದಲ್ಲಿ ಸಂಘವು ಉನ್ನತ ಸಾಧನೆಯನ್ನು ಮಾಡಿರುತ್ತದೆ. ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಯಶಸ್ವಿ ಸಂಘ ಇದಾಗಿದ್ದು ಮುಂದಿನ ವರ್ಷ 300 ಕೋಟಿ ರೂ.ವ್ಯವಹಾರ ನಡೆಸುವ ಗುರಿ ಹೊಂದಿದೆ. ಈ ವರ್ಷ 5.23 ಕೋಟಿ ಸರ್ವಕಾಲಿಕ ಲಾಭ ಗಳಿಸಿದ್ದು ವಾರ್ಷಿಕ ನಿವ್ವಳ ಲಾಭ 49 ಲಕ್ಷವಾಗಿರುತ್ತದೆ. ಸದಸ್ಯರಿಗೆ 12% ಡಿವಿಡೆಂಡ್ ನೀಡಲಾಗುವುದು ಎಂದು ಬೆಳಪು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿಯವರು ಸಂಘದ ವಾರ್ಷಿಕ ಮಹಾಸಭೆಯಲ್ಲಿ ತಿಳಿಸಿದರು.
ಸಹಕಾರಿ ಮಹಲ್ –ಜನರಿಕ್ ಔಷಧಾಲಯ ಸ್ಥಾಪನೆ
ಉಚ್ಚಿಲ ಶಾಖೆಯ ಸಂಘಕ್ಕೆ ನಬಾರ್ಡ್ ಯೋಜನೆಯಡಿ 3 ಕೋಟಿ ವೆಚ್ಚದಲ್ಲಿ ಸಹಕಾರಿ ಮಹಲ್ ಸ್ಥಾಪನೆಗೆ ಮಂಜೂರಾತಿ ದೊರಕಿದ್ದು, ಸದ್ರಿ ಮಹಲ್ನಲ್ಲಿ ಶಾಪಿಂಗ್ ಮಾಲ್, ಸಹಕಾರಿ ಸಭಾಂಗಣ, ರೈತರ ದಾಸ್ತಾನು ಕೊಠಡಿ ಮತ್ತು ವಿವಿಧ ರೈತ ಸಲಕರಣೆಗಳ ಮಾರಾಟ ಮಳಿಗೆ ಹಾಗೂ ಗೃಹೋಪಯೋಗಿ ವಸ್ತುಗಳ ಮಳಿಗೆ ಸ್ಥಾಪಿಸಲಾಗುವುದು. ಸಾರ್ವಜನಿಕ ಸೇವಾ ಮನೋಭಾವನೆಯೊಂದಿಗೆ ಪ್ರಧಾನಮಂತ್ರಿ ಜನೌಷಧಾಲಯ ಮತ್ತು ಕೃಷಿ ರಾಸಾಯನಿಕ ಔಷಧಿ ಕೇಂದ್ರವನ್ನು ಕೂಡಾ ಪ್ರಾರಂಭಿಸಲಾಗುವುದು. ಪಣಿಯೂರಿನ ಪ್ರಧಾನ ಕಛೇರಿಯನ್ನು ಸಂಪೂರ್ಣವಾಗಿ ನವೀಕರಿಸಲಾಗಿದೆ ಹಾಗೂ ಗ್ರಾಹಕರ ಬೇಡಿಕೆಯಂತೆ ದೊಡ್ಡ ಗಾತ್ರದ ಸೇಫ್ ಲಾಕರ್ ಅಳವಡಿಸಲಾಗಿದೆ. ಕೃಷಿ, ವ್ಯಾಪಾರ, ವಾಹನ, ಚಿನ್ನಾಭರಣ ಸಾಲ, ಗೃಹ ನಿರ್ಮಾಣ ಸಾಲ ಹಾಗೂ 2 ಗಂಟೆಯಲ್ಲಿ ಒದಗಿಸುವ ‘ತುರ್ತು ಸಹಕಾರಿ ಸಾಲ’ ಯೋಜನೆ ಜಾರಿ ಗೊಳಿಸಲಾಗಿದೆ.
ಲೆಕ್ಕ ಪರಿಶೋಧನಾ ಇಲಾಖೆಯವರಿಂದ 19 ವರ್ಷದಿಂದ ಸಂಘವು ‘ಎ’ ಶ್ರೇಣಿಯ ಸಹಕಾರಿ ಸಂಘ ಆಗಿ ಪರಿವರ್ತನೆಗೊಂಡಿದೆ. 2001-02ನೇ ಸಾಲಿನಿಂದ ಸಂಘ ನಿರಂತರವಾಗಿ ಉತ್ತಮ ಪ್ರಗತಿಯನ್ನು ಸಾಧಿಸುತ್ತಾ ಬಂದಿದೆ.ಈ ಸಾಧನೆಯನ್ನು ಗುರುತಿಸಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು ಕಳೆದ 12 ವರ್ಷಗಳಿಂದ ನಿರಂತರವಾಗಿ ಅತ್ಯುತ್ತಮ ಸಹಕಾರಿ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿರುತ್ತಾರೆ. 250 ನವೋದಯ ಸ್ವಸಹಾಯ ಸಂಘಗಳನ್ನು ರಚಿಸಿ ಗುಂಪುಗಳಿಗೆ ಪ್ರಸಕ್ತ ಸಾಲಿನಲ್ಲಿ 3 ಕೋಟಿ ರೂ.ಸಾಲ ವಿತರಿಸಲಾಗಿದೆ. ಸಾಲಿನಲ್ಲಿ 45 ಕೋಟಿ ರೂ. ವಿವಿಧ ಠೇವಣಾತಿಗಳಿದ್ದು, 40 ಕೋಟಿ ರೂ. ವಿವಿಧ ಹೊರ ಸಾಲಗಳನ್ನು ನೀಡಲಾಗಿದ್ದು ಶೇಕಡಾ 96 ರಷ್ಟು ಸಾಲ ವಸೂಲಾತಿ ಪ್ರಗತಿ ಸಾಧಿಸಿದೆ. 93 ಲಕ್ಷ ರೂ. ಪಾಲು ಬಂಡವಾಳ ಹೊಂದಿದ್ದು 52 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. ರೈತರಿಗೆ ಕಡಿಮೆ ಬಡ್ಡಿದರ ಹಾಗೂ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸಿರುತ್ತದೆ ಎಂದು ಅವರು ಮಾಹಿತಿ ನೀಡಿದರು.
ಸಂಘದ ಆಡಳಿತ ಮಂಡಳಿ ನಿರ್ದೇಶಕರುಗಳಾದ ಪಾಂಡು ಶೇರಿಗಾರ, ಆಲಿಯಬ್ಬ, ಗೋಪಾಲ ಪೂಜಾರಿ, ಸೈಮನ್ ಡಿಸೋಜ, ಪಾಂಡು ಶೆಟ್ಟಿ, ದ್ಯುಮಣಿ.ಆರ್.ಭಟ್, ಬಾಲಕೃಷ್ಣ.ಎಸ್.ಆಚಾರ್ಯ, ಶ್ರೀಮತಿ ಅನಿತ, ಶ್ರೀಮತಿ ಮೀನ ಪೂಜಾರ್ತಿ, ಶ್ರೀಮತಿ ವಿಮಲ ಅಂಚನ್, ಶ್ರೀಮತಿ ಶೋಭಾ.ಬಿ.ಭಟ್, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿ ಬಾಲಕೃಷ್ಣ ಭಟ್ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸುಲೋಚನ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

















