ನಿಟ್ಟೆ: ‘ಜ್ಞಾನವೆಂಬ ಸಂಪತ್ತನ್ನು ನಾವು ಸಂಪಾದಿಸಿದರೆ, ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಜ್ಞಾನವೆಂಬ ಸಂಪತ್ತನ್ನು ಕಾಲು ಭಾಗ ಗುರುಗಳಿಂದ, ಕಾಲು ಭಾಗ ತಮ್ಮ ಸ್ವಂತ ಸಾಧನೆಯಿಂದ, ಕಾಲು ಭಾಗವನ್ನು ಸಹಪಾಠಿಗಳ ಸಹಕಾರದಿಂದ ಹಾಗೂ ಇನ್ನುಳಿದ ಕಾಲು ಭಾಗವನ್ನು ಕಾಲಕ್ರಮೇಣವಾಗಿ ಅನುಭವದಿಂದ ಕಲಿಯಬಹುದಾಗಿದೆ’ ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲ ಡಾ.ಐ ರಮೇಶ್ ಮಿತ್ತಂತಾಯ ಅಭಿಪ್ರಾಯಪಟ್ಟರು.
ಅವರು ಆ.22 ರಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗವು ಆರಂಭಿಸಿರುವ ‘ರಿನಿವೇಬಲ್ ಎನರ್ಜಿ ಕ್ಲಬ್’ ನ್ನು ಉದ್ಘಾಟಿಸಿ, ವಿಭಾಗವು ಹಮ್ಮಿಕೊಂಡಿದ್ದ ‘ನ್ಯೂ ಎಂಡ್ ರಿನಿವೇಬಲ್ ಸೋರ್ಸಸ್ ಆಫ್ ಎನರ್ಜಿ’ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿದ್ದ ಯು.ಬಿ.ಡಿ.ಟಿ ಕಾಲೇಜು ದಾವಣಗೆರೆಯ ಇಂಡಸ್ಟ್ರಿಯಲ್ ಎಂಡ್ ಪ್ರೊಡಕ್ಷನ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಡಾ.ನಾಗೇಶ್ ಮಾತನಾಡಿ ‘ಹಲವಾರು ಸುಭಾಷಿತಗಳಲ್ಲಿ ವಿದ್ವಾಂಸರು ಉಲ್ಲೇಖಿಸಿರುವಂತೆ ವಿದ್ಯೆ/ಜ್ಞಾನ ಎಂಬುದು ಮಾನವ ಜೀವನದ ಅತ್ಯಮೂಲ್ಯವಾದ ಸಂಪತ್ತು. ಈ ಸಂಪತ್ತು ಯಾರಿಂದಲೂ ಕಳವು ಮಾಡುವುದಕ್ಕಾಗಲಿ, ವಿಭಾಗಿಸಿ ಇನ್ನೊಬ್ಬರು ಕೊಂಡೊಯ್ಯೂವುದಕ್ಕಾಗಲಿ ಸಾಧ್ಯವಾಗದು. ವಿದ್ಯೆಯನ್ನು ಗುರು ಮುಖೇನ ಹಾಗೂ ರಿನಿವೇಬಲ್ ಎನರ್ಜಿ ಕ್ಲಬ್ ನಂತಹ ತಾಂತ್ರಿಕ ಕೂಟಗಳಲ್ಲಿ ವಿಮರ್ಶಾತ್ಮಕ ಚಿಂತನೆಗಳನ್ನು ನಡೆಸುವುದರ ಮೂಲಕ ವೃದ್ಧಿಸಿಕೊಳ್ಳಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.
ಇನ್ನೋರ್ವ ಗೌರವ ಅತಿಥಿ ಎನ್.ಐ.ಟಿ.ಕೆ ಸುರತ್ಕಲ್ ನ ಮೆಕ್ಯಾನಿಕಲ್ ವಿಭಾಗದ ಪ್ರೊಫೆಸರ್ ಡಾ.ಸತ್ಯಭಾಮ ಮಾತನಾಡಿ, ವಿದ್ಯಾರ್ಜನೆಯ ದೃಷ್ಠಿಯಿಂದ ಇಂತಹ ಕಾರ್ಯಾಗಾರಗಳನ್ನು ಕಾಲೇಜುಗಳಲ್ಲಿ ಹಮ್ಮಿಕೊಳ್ಳುವುದು ಅತಿಮುಖ್ಯ. ಇಂತಹ ವಿಷಯಗಳ ಬಗೆಗೆ ಕಾರ್ಯಾಗಾರವನ್ನು ಹಮ್ಮಿಕೊಳ್ಳುವುದರಿಂದ ಇಂಧನಗಳನ್ನು ಹೇಗೆ ಹಿತ-ಮಿತವಾಗಿ ಬಳಸಬಹುದು, ಬೇರೆ ಯಾವ ರೀತಿಯ ಇಂಧನ ಮೂಲಗಳನ್ನು ಬಳಸಬಹುದು ಮುಂತಾದ ವಿಚಾರಗಳ ಬಗೆಗೆ ಮಾಹಿತಿ ಸಿಗಬಹುದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ತಾಂತ್ರಿಕ ಜ್ಞಾನಾರ್ಜನೆಯಲ್ಲಿ ಹೆಚ್ಚಿನ ವಿಚಾರಗಳು ಪ್ರಾಯೋಗಿಕ ಕಲಿಯುವಿಕೆಯೇ ಆಗಿದೆ. ವಿದ್ಯೆಯಂತೆ ರಿನಿವೇಬಲ್ ಎನರ್ಜಿ ಸೋರ್ಸ್ (ನವೀಕರಿಸಬಹುದಾದ ಇಂಧನ ಪ್ರಕಾರಗಳು) ನ್ನು ಯಾರೂ ಕಳವು ಮಾಡುವುದಕ್ಕಾಗಲಿ, ವಿಭಾಗಿಸಿ ಇನ್ನೊಬ್ಬರು ಕೊಂಡೊಯ್ಯೂವುದಕ್ಕಾಗಲಿ ಸಾಧ್ಯವಾಗದು. ಈ ಇಂಧನಶಕ್ತಿಯು ಪ್ರಕೃತಿಯಲ್ಲಿ ಉಚಿತವಾಗಿ ದೊರೆಯುವುದು. ಇದನ್ನು ನಾವು ನಮಗೆ ಬೇಕಾದ ಪ್ರಕಾರಕ್ಕೆ ಪರಿವರ್ತಿಸುವ ಕಾರ್ಯ ಮಾಡಬೇಕಾಗಿದೆ ಎಂದರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ ಪೈ ಸ್ವಾಗತಿಸಿದರು. ಸಹಪ್ರಾಧ್ಯಾಪಕಿ ಡಾ.ರಶ್ಮೀ ಪಿ. ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಾಗಾರದ ಸಂಯೋಜಕ ಡಾ. ಅನಂತಕೃಷ್ಣ ಸೋಮಯಾಜಿ ವಂದಿಸಿದರು. ಸಹಪ್ರಾಧ್ಯಾಪಕ ಡಾ.ಅಜಿತ್ ಹೆಬ್ಬಾಳೆ ಕಾರ್ಯಕ್ರಮ ನಿರೂಪಿಸಿದರು.