ಉಡುಪಿ: ರವಿ ಕಟಪಾಡಿ ಮತ್ತು ಗೆಳೆಯರ ಬಳಗವು ಈ ಬಾರಿ ವಿನೂತನ ವೇಷ ಧರಿಸಿ ಜನರ ಮುಂದೆ ಬರಲು ಸಜ್ಜಾಗಿದೆ. ಈ ಬಾರಿ ಆರು ಮಕ್ಕಳ ಚಿಕಿತ್ಸೆಗೆ ಧನ ಸಂಗ್ರಹ ಮಾಡುವ ಗುರಿ ಇದೆ ಎಂದು ರವಿ ಕಟಪಾಡಿ ಬುಧವಾರ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ತಮ್ಮ ವೇಷದ ಬಗ್ಗೆ ಗುಟ್ಟು ಬಿಟ್ಟುಕೊಡದ ರವಿ, ಹೈದರಾಬಾದ್, ಮಂಗಳೂರು ಮತ್ತು ಕಟಪಾಡಿಯ 7 ಕಲಾವಿದರು ಒಂದೂವರೆ ತಿಂಗಳಿನಿಂದ ಈ ವೇಷಕ್ಕಾಗಿ ತಯಾರಿ ನಡೆಸುತ್ತಿದ್ದಾರೆ ಎಂದಷ್ಟೇ ಮಾಹಿತಿ ನೀಡಿದರು.
ಕಳೆದ ಏಳು ವರ್ಷಗಳಿಂದ ಸತತವಾಗಿ ವಿನೂತನ ವೇಷ ಧರಿಸಿ ಜನರ ಮನರಂಜಿಸುವ ರವಿ ಕಟಪಾಡಿ ಬಳಗವು 89,75,000 ರೂ ಗಳನ್ನು ಸಂಗ್ರಹಿಸಿ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ಧನಸಹಾಯದ ರೂಪದಲ್ಲಿ ನೀಡುತ್ತಾ ಬಂದಿದೆ. ಈ ವರ್ಷ 10 ಲಕ್ಷ ರೂ ಸಂಗ್ರಹಣೆಯಾದರೆ ಒಟ್ಟು ಒಂದು ಕೋಟಿ ರುಪಾಯಿ ಧನಸಂಗ್ರಹಣೆ ಮಾಡಿದ ಗುರಿ ತಲುಪುತ್ತೇವೆ ಎಂದರು.
ಕಾರ್ಕಳ ತಾಲೂಕಿನ ಕಡ್ತಲದ ಚಂದ್ರಶೇಖರ್ ಅವರ ಪುತ್ರಿ ಸ್ವರ್ಣ(2) ಲಿವರ್ ಟ್ರಾನ್ಸ್ ಪ್ಲಾಂಟ್ ಮಾಡಿಸಲು 17 ಲಕ್ಷ ರೂ ವೆಚ್ಚವಾಗಲಿದೆ. ಮೂಲ್ಕಿಯ ಸುಮನಾ ಮತ್ತು ದಾಮೋದರ್ ಕಾಮತ್ ದಂಪತಿಯ ಎರಡೂವರೆ ತಿಂಗಳ ಮಗು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು ಚಿಕಿತ್ಸೆಗೆ 7-8 ಲಕ್ಷ ಬೇಕಿದೆ. ಕುಂದಾಪುರದ ಕಟ್ ಬೇಲ್ತೂರಿನ ಶ್ಯಾಮಲಾ ಅವರ ಮಗ ಪವನ್ ಕುಮಾರ್ (4) ಥಾಲಸೀಮಿಯಾದಿಂದ ಬಳಲುತ್ತಿದ್ದು, ಹುಡಗನ ಬೋನ್ ಮ್ಯಾರೋ ಚಿಕಿತ್ಸೆಗೆ 40 ಲಕ್ಷ ರೂ ತಗಲುತ್ತದೆ. ಈ ಮಕ್ಕಳ ಚಿಕಿತ್ಸೆಗೆ ಸಹಾಯ ಮಾಡುವ ಜೊತೆಗೆ ಇನ್ನೂ ಮೂರು ಮಕ್ಕಳಿಗೆ ಧನಸಹಾಯ ಒದಗಿಸಲಾಗುವುದು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅರುಣ್, ಚರಣ್, ಮಹೇಶ್ ಶೆಣೈ ಉಪಸ್ಥಿತರಿದ್ದರು.