ಷೇರು ಮಾರುಕಟ್ಟೆಯ ಅನಭಿಷಕ್ತ ದೊರೆ, ಬಿಗ್ ಬುಲ್, ಭಾರತದ ವಾರನ್ ಬಫೆಟ್ ಎಂದು ಖ್ಯಾತಿವೆತ್ತ ರಾಕೇಶ್ ಜುಂಜುನ್ವಾಲಾ ಭಾನುವಾರದಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆದರೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕೆಂದು ಬಯಸುವವರಿಗೆ ರಾಕೇಶ್ ಜುಂಜುನ್ವಾಲಾ ಬಹುದೊಡ್ಡ ಪಾಠಗಳನ್ನು ಬಿಟ್ಟು ಹೋಗಿದ್ದಾರೆ.
ಎಂಬತ್ತರ ದಶಕದಲ್ಲಿ ಸಣ್ಣ ಬಂಡವಾಳದಿಂದ ಪ್ರಾರಂಭಿಸಿ, ಭಾರತದ ಬೆಳವಣಿಗೆಯ ನಿರೀಕ್ಷೆಗಳ ಮೇಲೆ ಸಕಾರಾತ್ಮಕವಾಗಿ ಉಳಿಯುತ್ತಾ ತಾಳ್ಮೆ ಮತ್ತು ದೃಢತೆಯಿಂದ ಎದೆಬಿಡದ ಪರಿಶ್ರಮದಿಂದ ತನ್ನದೆನ್ನುವ ದೊಡ್ಡ ಸಾಮ್ರಾಜ್ಯವನ್ನೇ ನಿರ್ಮಿಸಿದರು. ರಾಕೇಶ್ ಜುಂಜುನ್ವಾಲಾ ಅವರಿಗೆ ಭಾರತೀಯ ಷೇರುಮಾರುಕಟ್ಟೆಯ ಮೇಲೆ ಅಗಾಧವಾದ ನಂಬಿಕೆ ಇತ್ತು. ಅತ್ಯುತ್ತಮವಾದದ್ದು ಇನ್ನೂ ಬರಲಿದೆ ಎನ್ನುವ ಅವರ ಆಶಾವಾದಿ ವ್ಯಕ್ತಿತ್ವದಿಂದಾಗಿ ಅವರು ಯಶಸ್ಸಿನ ಉತ್ತುಂಗವನ್ನೇರಲು ಸಾಧ್ಯವಾಯಿತು.
ರಾಕೇಶ್ ಜುಂಜುನ್ವಾಲಾ ಅವರನ್ನು ಶ್ರೀಮಂತರನ್ನಾಗಿಸಿದ ಅವರ ಐದು ಹೂಡಿಕೆ ತಂತ್ರಗಳು:
1. ಸರಿಯಾದುದನ್ನು ಖರೀದಿಸಿ, ಬಿಗಿಯಾಗಿ ಕುಳಿತುಕೊಳ್ಳಿ
ಯಾವಾಗಲೂ ‘ಸರಿಯಾದುದನ್ನು ಖರೀದಿಸುವುದು ಮತ್ತು ಬಿಗಿಯಾಗಿ ಕುಳಿತುಕೊಳ್ಳುವುದು’. ಅಂದರೆ, ಷೇರು ಮಾರುಕಟ್ಟೆ ಮೇಲೆ ಸ್ವಂತ ಸಂಶೋಧನೆ ಮಾಡಿ, ಸರಿಯಾದ ಸ್ಟಾಕ್ ಅನ್ನು ಖರೀದಿಸಿ, ನಂತರ ಸೂಕ್ತ ಸಮಯದವರೆಗೆ ಅದನ್ನು ಹಾಗೆಯೆ ಇಟ್ಟು ಸುಮ್ಮನೆ ಕುಳಿತುಕೊಳ್ಳಿ. ಕಂಪನಿಯ ವ್ಯವಹಾರದಲ್ಲಿ ನಂಬಿಕೆ ಇರಲಿ. ಗಾಬರಿಯಿಂದಾಗಿ ನಿಮ್ಮ ಹೂಡಿಕೆ ನಿರ್ಧಾರಗಳು ಬದಲಾಗದಿರಲಿ.
2. ನಿಮ್ಮ ಸ್ಟಾಕ್ ವಿಚಾರಗಳ ಬಗ್ಗೆ ಎಂದಿಗೂ ಭಾವುಕರಾಗಬೇಡಿ
ಪತ್ರಕರ್ತರೊಬ್ಬರು ಜುಂಜುನ್ವಾಲಾರಿಗೆ ನೀವು ಸ್ಟಾಕ್ ಮಾರ್ಕೆಟ್ ವಿಷಯದಲ್ಲಿ ಭಾವುಕರಾಗುತ್ತೀರಾ ಎಂದು ಪ್ರಶ್ನಿಸಿದಾಗ, ಅವರು ತಾನು ಯಾವುದೇ ಭಾವನೆಗಳನ್ನು ಹೊಂದಿದ್ದರೆ, ಅದು ತನ್ನ ಮಕ್ಕಳು ಮತ್ತು ತನ್ನ ಹೆಂಡತಿಗಾಗಿ ಮತ್ತು ಗೆಳತಿಗಾಗಿ ಮಾತ್ರ, ಆದರೆ ಮಾರ್ಕೆಟ್ ವಿಷಯದಲ್ಲಿ ತಾನೆಂದೂ ಭಾವುಕನಾಗುವುದಿಲ್ಲ ಎಂದಿದ್ದರು. ಸ್ಟಾಕ್ ಮಾರುಕಟ್ಟೆಯಲ್ಲಿ ದೀರ್ಘಾವಧಿಗೆ ಹೂಡಿಕೆ ಮಾಡುವಾಗ ಭಾವನಾತ್ಮಕವಾಗುವುದು ಸಹಜ. ಆದರೆ ನೀವು ಶ್ರೀಮಂತರಾಗಲು ಬಯಸಿದರೆ, ನಿಮ್ಮ ಸ್ಟಾಕ್ ವಿಚಾರಗಳ ಬಗ್ಗೆ ಎಂದಿಗೂ ಭಾವನಾತ್ಮಕವಾಗಬೇಡಿ ಮತ್ತು ಅಗತ್ಯವಿದ್ದರೆ ಸರಿಯಾದ ಸಮಯಕ್ಕೆ ನಿರ್ಗಮಿಸಿ.
3. ತಾಳ್ಮೆಯೆ ಯಶಸ್ಸಿನ ಕೀಲಿಕೈ
ಶ್ರೀಮಂತಿಕೆ ಎನ್ನುವುದು ಒಂದೇ ದಿನದಲ್ಲಿ ಬರುವುದಿಲ್ಲ. ರಾಕೇಶ್ ಜುಂಜುನ್ವಾಲಾರಿಗೂ ಶ್ರೀಮಂತಿಕೆ ಒಂದೇ ದಿನದಲ್ಲಿ ಬರಲಿಲ್ಲ. ಜೀವನದಲ್ಲಿ ತಾಳ್ಮೆ, ವರ್ಷಗಳ ಸಂಶೋಧನೆ, ಶ್ರದ್ಧೆ ಮತ್ತು ತಪಸ್ಸಿನಿಂದಾಗಿ ಆತ ಈ ಎತ್ತರಕ್ಕೇರಲು ಸಾಧ್ಯವಾಯಿತು. ಜುಂಜುನ್ವಾಲಾ ಅವರ ಬಂಡವಾಳವು 25-30% ರಷ್ಟು ಬಾರಿ ಸರಿಪಡಿಸಲ್ಪಟ್ಟಿದೆ, ಆದರೆ ಆತ ಯಾವಾಗಲೂ ಈ ತಿದ್ದುಪಡಿಯನ್ನು ಖರೀದಿಸಲು ಅವಕಾಶವಾಗಿ ಬಳಸುತ್ತಿದ್ದರು.
4. ಇತರರು ಮಾರಾಟ ಮಾಡುವಾಗ ಖರೀದಿಸಿ ಮತ್ತು ಇತರರು ಖರೀದಿಸುವಾಗ ಮಾರಾಟ ಮಾಡಿ
ಜುಂಜುನ್ವಾಲಾ ಯಾವಾಗಲೂ ಅಲೆಯ ವಿರುದ್ಧ ಈಜುವುದನ್ನು ನಂಬಿದ್ದರು. ಅವರು ಹೇಳುತ್ತಿದ್ದ ಮಾತು, “ಇತರರು ಮಾರಾಟ ಮಾಡುವಾಗ ಖರೀದಿಸಿ ಮತ್ತು ಇತರರು ಖರೀದಿಸುತ್ತಿರುವಾಗ ಮಾರಾಟ ಮಾಡಿ.” ಅವರು ಹಿಂಡಿನ ಹಿಂದೆ ಹೋಗುವ ಮನಸ್ಥಿತಿಗೆ ವಿರುದ್ಧವಾಗಿದ್ದರು ಮತ್ತು ಹೂಡಿಕೆ ಮಾಡುವಾಗ ಮಾರುಕಟ್ಟೆ ಹೂಡಿಕೆದಾರರು ತಮ್ಮ ಜಾಣ್ಮೆಯನ್ನು ಉಪಯೋಗಿಸಬೇಕೆಂದು ಬಯಸಿದ್ದರು. ನಾನು ಜನರಿಗೆ ಸಲಹೆಗಳನ್ನು ನೀಡುತ್ತೇನೆ ಆದರೆ ನೀವು ಎರವಲು ಪಡೆದ ಜ್ಞಾನದಿಂದ ಲಾಭ ಪಡೆಯಲು ಸಾಧ್ಯವಿಲ್ಲ ಎಂದವರು ಹೇಳುತ್ತಿದ್ದರು.
5. ಎಂದಿಗೂ ಅಸಮಂಜಸವಾದ ಮೌಲ್ಯಗಳ ಮೇಲೆ ಹೂಡಿಕೆ ಮಾಡಬೇಡಿ
ಎಂದಿಗೂ ಅಸಮಂಜಸವಾದ ಮೌಲ್ಯಗಳ ಮೇಲೆ ಹೂಡಿಕೆ ಮಾಡಬೇಡಿ. ಅಬ್ಬರದ ಪ್ರಚಾರ ಮಾಡುವ ಕಂಪನಿಗಳ ಹಿಂದೆ ಎಂದೂ ಓಡಿಹೋಗಬೇಡಿ ಎಂದು ಜುಂಜುನ್ವಾಲಾ ಹೇಳುತ್ತಿದ್ದರು. ಹೀಗಾಗಿ, ನೀವು ಅಸಮಂಜಸವಾದ ಮೌಲ್ಯಗಳಲ್ಲಿ ಸ್ಟಾಕ್ ವಹಿವಾಟನ್ನು ನೋಡಿದಾಗಲೆಲ್ಲಾ, ಅದರ ಹಿಂದೆ ಹೋಗುವುದನ್ನು ತಪ್ಪಿಸಿ. ಇಲ್ಲವಾದಲ್ಲಿ, ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕಳೆದುಕೊಳ್ಳಬಹುದು.
ಈ ಐದು ತಂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಬಹಳ ಜಾಣ್ಮೆ ಮತ್ತು ತಾಳ್ಮೆಯಿಂದ ಶೇರು ಮಾರುಕಟ್ಟೆಯ ಮೇಲೆ ಸಂಶೋಧನೆ ನಡೆಸಿ ಹೂಡಿಕೆ ಮಾಡಿದಲ್ಲಿ ಜೀವನದಲ್ಲಿ ಶ್ರೀಮಂತರಾಗಬಹುದು. ಶ್ರೀಮಂತಿಕೆಯಿಂದ ಬದುಕು ಕಟ್ಟಿಕೊಳ್ಳಬಹುದು, ಆದರೆ ಎಷ್ಟೇ ಹಣವಿದ್ದರೂ ಬದುಕನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ, ಮೃತ್ಯುವನ್ನು ಮುಂದೂಡಲು ಸಾಧ್ಯವಿಲ್ಲವೆನ್ನುವುದೂ ಅವರ ಜೀವನದಿಂದ ಕಲಿಯಬಹುದಾದ ಪಾಠ
ಕೃಪೆ: ಫೈನಾಷ್ಶಿಯಲ್ ಎಕ್ಸ್ ಪ್ರೆಸ್